

ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಪವಾಡದಂತೆ ರಮೇಶ್ ವಿಶ್ವಾಸ್ ಕುಮಾರ್ ಬದುಕುಳಿದಿದ್ದಾರೆ. ವಿಮಾನದಲ್ಲಿದ್ದ ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರು ಸೇರಿದಂತೆ 242 ಜನರು ಪ್ರಯಾಣಿಸುತ್ತಿದ್ದು, ಈ ಪೈಕಿ 241 ಜನರು ಸಾವನಪ್ಪಿ ಒಬ್ಬನೇ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದರು. ಇದೀಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖನಾಗಿ ಬಂದಿದ್ದು, ತನ್ನ ಅಣ್ಣನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ದಿಯುವಿನಲ್ಲಿ ಇಂದು (18) ಬೆಳಗ್ಗೆ ಅಜಯ್ ಅವರ ಅಂತ್ಯಕ್ರಿಯೆ ನಡೆದಿದೆ. ರಮೇಶ್ ವಿಶ್ವಾಸ್ಕುಮಾರ್ ತನ್ನ ಅಣ್ಣನ ಶವಪೆಟ್ಟಿಗೆಯನ್ನು ಹೆಗಲ ಮೇಲೆ ಹೊತ್ತು ಕಣ್ಣೀರಾಕಿದ್ದಾರೆ. ಮನೆಯಿಂದ ಸ್ಮಶಾನದವರೆಗೂ ತಾವು ಹೆಗಲಮೇಲೆ ಹೊತ್ತೊಯ್ದು ಅಣ್ಣನಿಗೆ ಬೀಳ್ಕೊಟ್ಟಿದ್ದಾರೆ. ಜೀವನ ಪೂರ್ತಿ ಈ ಘಟನೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಕಣ್ಣೀರಾಕಿದ್ದಾರೆ.
ರಮೇಶ್ ವಿಶ್ವಾಸ್ಕುಮಾರ್ ಮತ್ತು ಅವರ ಸಹೋದರ ಅಜಯ್ ಲಂಡನ್‌ಗೆ ಪ್ರಯಾಣ ಮಾಡುತ್ತಿದ್ದು, ಏಕಾಏಕಿ ಸಂಭವಿಸಿದ ವಿಮಾನ ದುರಂತದಲ್ಲಿ ರಮೇಶ್ ಅಣ್ಣ ಸಾವನಪ್ಪಿದ್ದರು. ಇನ್ನೂ ರಮೇಶ್ ಮಾತ್ರ ಸಾವನ್ನೇ ಗೆದ್ದು ಬಂದಿದ್ದು, ಅಣ್ಣನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಕಂಬನಿ ಮಿಡಿದಿದ್ದಾರೆ.
(ಏಜೆನ್ಸೀಸ್)
ಅಪಘಾತದಲ್ಲಿ ಸಾವನ್ನಪ್ಪಿದ ಇತರ ಏಳು ಜನರ ಶವಗಳನ್ನು ಅಂತ್ಯಕ್ರಿಯೆಗಾಗಿ ಡಿಯುಗೆ ತರಲಾಗಿದೆ ಎಂದು ವರದಿಯಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಕನಿಷ್ಠ 190 ಜನರನ್ನು ಡಿಎನ್‌ಎ ಪರೀಕ್ಷೆಗಳ ಮೂಲಕ ಗುರುತಿಸಲಾಗಿದೆ ಮತ್ತು 159 ಜನರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
159 ಮೃತದೇಹ ಹಸ್ತಾಂತರ
ಕಳೆದ ವಾರ(ಜೂ.12) ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ (ಎಐ-171) ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲೇ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಮಂದಿ ಮತ್ತು ವಿಮಾನ ಬಿದ್ದ ಕಟ್ಟಡದಲ್ಲಿದ್ದ 29 ಮಂದಿ ಮೃತಪಟ್ಟಿದ್ದಾರೆ. 11ಎ ಸೀಟಿನಲ್ಲಿ ಕುಳಿತಿದ್ದ ವಿಶ್ವಾಸ್ ಅವರು ಪವಾಡಸದೃಶವಾಗಿ ಪಾರಾಗಿದ್ದರು.