ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನ: ಈ ಕ್ಷಣದವರೆಗೆ ನಡೆದಿದ್ದೇನು? ಇಲ್ಲಿದೆ ಮಾಹಿತಿ... Plane Crash

Plane Crash
Published on

Plane Crash: ಗುರುವಾರ (ಜೂನ್​ 12) ಮಧ್ಯಾಹ್ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್​ ಆದ ಕೆಲವೇ ಸಮಯದಲ್ಲಿ ಪತನಗೊಡಿದೆ. ಏರ್ ಇಂಡಿಯಾ 171 ವಿಮಾನವಾಗಿ ಕಾರ್ಯನಿರ್ವಹಿಸುತ್ತಿರುವ ಬೋಯಿಂಗ್ 787-8 ಡ್ರೀಮ್‌ಲೈನರ್ 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು.

ವಿಮಾನವು ಇಂದು ಮಧ್ಯಾಹ್ನ 1.38ಕ್ಕೆ ಹೊರಟಿತು ಮತ್ತು 5 ನಿಮಿಷಗಳ ನಂತರ ಪತನಗೊಂಡಿದೆ. ಈ ಘಟನೆಯ ನಂತರ, ಅಹಮದಾಬಾದ್‌ನಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (SVPIA)ವನ್ನು ಕಂಪ್ಲೀಟ್​ ಬಂದ್​ ಮಾಡಲಾಗಿದೆ. ಪ್ರಸ್ತುತ ಯಾವುದೇ ವಿಮಾನಗಳು ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ಸೂಚನೆ ಬರುವವರೆಗೂ ಎಲ್ಲ ವಿಮಾನ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಮೇಘನಿನಗರ ಪ್ರದೇಶದ ಬಳಿ ಈ ಘಟನೆ ಸಂಭವಿಸಿದೆ. ಅಪಘಾತದ ಸ್ಥಳದಲ್ಲಿ ಸೆರೆಹಿಡಿದಿರುವ ದೃಶ್ಯಗಳು ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಆವರಿಸುತ್ತಿರುವುದನ್ನು ತೋರಿಸಿವೆ. ತುರ್ತು ಪ್ರತಿಕ್ರಿಯೆ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಬೆಂಕಿಯನ್ನು ನಿಯಂತ್ರಿಸಲು ಕನಿಷ್ಠ ಏಳು ಅಗ್ನಿಶಾಮಕ ವಾಹನಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಈ ವಿಮಾನವನ್ನು 8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ಮುನ್ನಡೆಸುತ್ತಿದ್ದರು. ಅವರಿಗೆ 1,100 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಸಹ ಪೈಲಟ್​ ಆಗಿದ್ದರು. ಈ ವಿಮಾನದಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ್​ ರೂಪಾನಿ ಕೂಡ ಇದ್ದರು ಎಂಬುದು ದೃಢವಾಗಿದೆ.

ಏರ್​ ಟ್ರಾಫಿಕ್​ ಕಂಟ್ರೋಲರ್​ ಪ್ರಕಾರ, ವಿಮಾನವು ರನ್‌ವೇ 23 ರಿಂದ 01.39 ಕ್ಕೆ ಹೊರಟಿತು. ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ, ವಿಮಾನದ ಸಿಬ್ಬಂದಿ MAYDAY ಕರೆಯನ್ನು ಮಾಡಿದರು. ಆದಾಗ್ಯೂ, ಕೆಲವೇ ನಿಮಿಷಗಳಲ್ಲಿ ಸಂಪರ್ಕ ಕಡಿತಗೊಂಡಿತು. ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ, ವಿಮಾನ ನಿಲ್ದಾಣದ ಪರಿಧಿಯ ಹೊರಗೆ ವಿಮಾನ ಪತನಗೊಂಡಿತು. ಅಪಘಾತದ ಸ್ಥಳದಿಂದ ಭಾರೀ ಕಪ್ಪು ಹೊಗೆ ಹೊರಬರುತ್ತಿರುವುದನ್ನು ಪ್ರತ್ಯಕ್ಷದರ್ಶಿಗಳು ಮತ್ತು ATC ಸಿಬ್ಬಂದಿ ಗಮನಿಸಿದರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದು, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ದೃಢಪಡಿಸಿದ್ದಾರೆ. ನಾನು ಅಧಿಕಾರಿಗಳಿಗೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತಕ್ಷಣ ಪ್ರಾರಂಭಿಸಲು ಮತ್ತು ಗಾಯಗೊಂಡ ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಸೂಚಿಸಿದ್ದೇನೆ ಎಂದಿದ್ದಾರೆ.

ಗಾಯಾಳುಗಳನ್ನು ಸಾಗಿಸಲು ಹಸಿರು ಕಾರಿಡಾರ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು NDRF ನಿಯೋಜನೆ ಸೇರಿದಂತೆ ಕೇಂದ್ರದಿಂದ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದ್ದಾರೆ ಎಂದು ಪಟೇಲ್ ಹೇಳಿದರು.

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಪು ಈ ದುರಂತ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ಬಗ್ಗೆ ತಿಳಿದು ಆಘಾತವಾಗಿದೆ. ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿರುವುದಾಗಿ ಮತ್ತು ಎಲ್ಲಾ ವಾಯುಯಾನ ಮತ್ತು ತುರ್ತು ಪ್ರತಿಕ್ರಿಯೆ ಸಂಸ್ಥೆಗಳಿಗೆ ತ್ವರಿತ ಮತ್ತು ಸಂಘಟಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದಾಗಿ ಸಚಿವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net