

ಪುತ್ತೂರು ಗ್ರಾಮಾಂತರ: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧ ಕಡೆಯ ಗ್ರಾಮೀಣ ಭಾಗದಲ್ಲಿ ಕ್ರೀಡಾಂಗಣ ಇದೆ. ಆದರೆ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಆ ಕ್ರೀಡಾಂಗಣಗಳು ಪಂದ್ಯಾಟಗಳನ್ನು ನಡೆಸಲು ಸುಸಜ್ಜಿತವಾಗಿಲ್ಲ. ಪಂದ್ಯಾಟ ನಡೆಸುವ ಸಂಘಟಕರೇ ಅದನ್ನು ದುರಸ್ತಿ ಮಾಡಿ ಆಡುವ ಸ್ಥಿತಿ ಇದೆ. ಹಾಗಾಗಿ ಕ್ಷೇತ್ರದ ಒಟ್ಟು 10 ಕಡೆಗಳಲ್ಲಿ ಇರುವ ಕ್ರೀಡಾಂಗಣಗಳನ್ನು ದುರಸ್ತಿ ಮಾಡಲಾಗುವುದು ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಮಾಡ್ನೂರು ಗ್ರಾಮದ ಕಾವು ಮಾಣಿಯಡ್ಕದಲ್ಲಿ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾಣಿಯಡ್ಕದಲ್ಲಿರುವ ಹೆಲಿಪ್ಯಾಡ್ ತುಂಬಾ ಸುಂದರವಾಗಿದ್ದು, ಇದನ್ನು ಯುವಜನ ಮತ್ತು ಕ್ರೀಡಾ ಇಲಾಖೆಗೆ ಸೇರಿಸಿ ಅನುದಾನವಿಟ್ಟು ದುರಸ್ತಿ ಮಾಡಿ ಗ್ರಾಮೀಣ ಕ್ರೀಡಾಕೂಟಗಳಿಗೆ ಅನುಕೂಲವಾಗುವಂತೆ ಸುತ್ತಲೂ ಬೆಳಕಿನ ವ್ಯವಸ್ಥೆಯಿರುವ ದೊಡ್ಡ ಮೈದಾನವಾಗಿ ಪರಿವರ್ತನೆ ಮಾಡಲಾಗುವುದು. ಕ್ರೀಡಾಂಗಣದ ಬಳಿಯೇ ಜಿಮ್ ಸೆಂಟರನ್ನು ಪ್ರಾರಂಭಿಸಿ ಯುವಕರ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬ್ಬೆ, ಪುತ್ತೂರು ನಗರಸಭಾ ಸದಸ್ಯ ಬಶೀರ್ ಪರ್ಲಡ್ಕ ಮತ್ತಿತರರು ಉಪಸ್ಥಿತರಿದ್ದರು.