ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ದಕ್ಷಿಣ ಕನ್ನಡ, ಕರಾವಳಿ ಪ್ರದೇಶದ ಮೂಲ ಸೌಕರ್ಯಗಳಾದ ಪ್ರವಾಸೋದ್ಯಮ, ಬೀಚ್, ಮೀನುಗಾರಿಕೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಒತ್ತು ನೀಡಿ ಈ ವರ್ಷದ ಬಜೆಟ್ನಲ್ಲಿ 500 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಪ್ರಸ್ತಾವನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಶುಕ್ರವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದ. ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಬೀಚ್, ಮೂಲಕ ಜನಸಾಮಾನ್ಯರಿಗೆ ಆಕರ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕರಾವಳಿ ಪ್ರದೇಶಕ್ಕೆ 500 ಕೋಟಿ ರೂ. ಹಣ ಈ ವರ್ಷದ ಬಜೆಟ್ನಲ್ಲಿ ಇಡಲು ಅಧಿವೇಶನದಲ್ಲಿ ಮಾತನಾಡಲಾಗುವುದು. ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಗಳಾಗಿ, ರಾಜ್ಯ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಲು ಯೋಜನೆ ಮಾಡಲಾಗುವುದು.
ಮಂಗಳೂರು ಎನ್ಐಟಿ ಕಾಲೇಜನ್ನು ಅಪ್ ಗ್ರೇಡ್ ಮಾಡಿ ಐಐಟಿ ಕಾಲೇಜು ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ. ಈ ಬಗ್ಗೆ ಯೋಜನೆ ಮಾಡಲಾಗುವುದು. ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾಮಗಾರಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ದ.ಕ. ಜಿಲ್ಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಉತ್ತಮ ಫಲಿತಾಂಶದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿದ ಬಗ್ಗೆ ಆರೋಪ ಸುಳ್ಳು ಅಂಕಿ ಅಂಶ ಪ್ರಕಾರ ಕೇವಲ 806 ಅರ್ಹ ಬಿಪಿಎಲ್ ಕಾರ್ಡ್ ರದ್ದಾಗಿದೆ. ಇದರಲ್ಲಿ ಅರ್ಹರಲ್ಲದವರ ಕಾರ್ಡ್ ರದ್ದಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ಬೆಳ್ತಂಗಡಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಮುಂದಿನ ಬಜೆಟ್ನಲ್ಲಿ ಹಣ ಇಡಲಾಗುವುದು. ಏಪ್ರಿಲ್ ತಿಂಗಳಿಂದ 5 ಕೆ.ಜಿ. ಅಕ್ಕಿಯ ಬದಲು 10 ಕೆ.ಜಿ. ನೀಡಲಾಗುವುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಕೆ.ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಮಹಿಳಾ ಕಾಗ್ರೆಸ್ ಅಧ್ಯಕ್ಷರಾದ ನಮಿತಾ ಕೆ.ತೋಟತ್ತಾಡಿ, ವಂದನಾ ಭಂಡಾರಿ, ಕೆಡಿಪಿ ಸದಸ್ಯ ಸಂತೋಷ್ ಬಿ.ಎಲ್., ಹಕೀಮ್ ಕೊಕ್ಕಡ ಉಪಸ್ಥಿತರಿದ್ದರು.