

ಲಖನೌ: ಪಿಟ್ಬುಲ್ ತಳಿಯ ನಾಯಿಗಳು ನೋಡಲು ಎಷ್ಟು ಮುದ ನೀಡುತ್ತವೋ ಅದೇ ರೀತಿ ಕೆಲವೊಮ್ಮೆ ತಮ್ಮ ಸಿಟ್ಟಿನಿಂದಲೂ ಸಹ ಹೆಚ್ಚು ಸುದ್ದಿಯಾಗಿರುತ್ತವೆ. ಈ ಹಿಂದೇ ಪಿಟ್ಬುಲ್ ತಿಳಯ ಶ್ವಾನ ಅನೇಕರ ಪ್ರಾಣ ತೆಗೆದಿರುವ ಬಗ್ಗೆ ಕೇಳಿದ್ದೇವೆ. ಆದರೆ, ಇದೀಗ ಅದೇ ಪಿಟ್ಬುಲ್ ತಳಿಯ ನಾಯಿ ಹಾವಿನ ದಾಳಿಯಿಂದ ಮಕ್ಕಳನ್ನು ರಕ್ಷಿಸಿರುವ ಘಟನೆ ಉತ್ತರಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಪಿಟ್ಬುಲ್ ನಾಯಿ ಕಿಂಗ್ ಕೋಬ್ರಾ ದಾಳಿಯಿಂದ ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಪಂಜಾಬ್ ಸಿಂಗ್ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಮಕ್ಕಳಿಬ್ಬರು ಮನೆಯ ಕಾಂಪೌಂಡ್ನಲ್ಲಿ ತಮ್ಮ ಪಾಡಿಗೆ ಆಟವಾಡಿಕೊಳ್ಳುತ್ತಿದ್ದು, ಗಾರ್ಡನ್ ಏರಿಯಾದಲ್ಲಿ ಕಿಂಗ್ ಕೋಬ್ರಾವನ್ನು ನೋಡಿ ಕೂಗಿಕೊಳ್ಳುತ್ತಾರೆ. ಮಕ್ಕಳಿಬ್ಬರ ಕೂಗಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಶ್ವಾನ ಜೆನ್ನಿ ಕೂಡಲೇ ರಕ್ಷಣೆಗೆ ಧಾವಿಸಿದ್ದು, ಹಾವನ್ನು ಕಚ್ಚಿ ಸಾಯಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಮಾತನಾಡಿರುವ ಶ್ವಾನದ ಮಾಲೀಕರಾದ ಪಂಜಾಬ್ ಸಿಂಗ್, ಜೆನ್ನಿ ಹಾವನ್ನು ಕೊಂದಿರುವುದು ಇದೇ ಮೊದಲಲ್ಲ. ನಮ್ಮ ಮನೆಯ ಸುತ್ತ ಹೊಲವಿದ್ದು, ಮಳೆಗಾಲ ಹಾಗೂ ಬೇಸಿಗೆಯಲ್ಲಿ ಹೆಚ್ಚಾಗಿ ಹಾವುಗಳು ಕಾಣಿಸಿಕೊಳ್ಳುತ್ತವೆ. ಜೆನ್ನಿ ಈವರೆಗೆ 8-10 ಹಾವುಗಳನ್ನು ಸಾಯಿಸಿದ್ದು, ಒಂದು ವೇಳೆ ಹಾವು ಮನೆಗೆ ನುಗ್ಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಜೆನ್ನಿಯ ಮಾಲೀಕ ಪಂಜಾಬ್ ಸಿಂಗ್ ಹೇಳಿದ್ದಾರೆ.