ಮಂಗಳೂರಿನಲ್ಲಿ ಗುಲಾಬಿ ಬಣ್ಣದ ಎಳನೀರದ್ದೇ ಸದ್ದು! ವೈರಲ್​ ಪೋಸ್ಟ್​ ಹಿಂದಿರೋ ಅಸಲಿಯತ್ತೇನು? Pink Coconut

Pink Coconut
Published on

Pink Coconut : ಬೇಸಿಗೆ ಕಾಲದಲ್ಲಿ ಎಳನೀರಿಗೆ ತುಂಬಾ ಬೇಡಿಕೆ ಇರುತ್ತದೆ. ಜನರ ದಾಹವನ್ನು ತೀರಿಸುವ ಎಳನೀರು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ತಾಜಾ ಸಂಗತಿ ಏನೆಂದರೆ, ಮಂಗಳೂರಿಗೆ ಗುಲಾಬಿ ಬಣ್ಣದ ಎಳನೀರು ಬಂದಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿದೆ.

'ಮಂಗಳೂರು ಮಾಹಿತಿ' ಎಂಬ ಫೇಸ್‌ಬುಕ್ ಖಾತೆಯಲ್ಲಿ ಈ ಗುಲಾಬಿ ಎಳನೀರು ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಸೀಯಾಳದ ರೇಟ್ ಜಾಸ್ತಿಯಾದಂತೆ ಮಂಗಳೂರಿಗೆ ಬಂತು ಕೆಂಬಣ್ಣದ ಇಂಡೋನೇಷ್ಯಾದ ಬೊಂಡ ಎಂದು ಶೀರ್ಷಿಕೆ ನೀಡಲಾಗಿದೆ.

ಸೀಯಾಳಕ್ಕೆ ಬಣ್ಣ ಹಾಕಿದ್ದಲ್ಲ ಇದು. ಬೊಂಡ (ಎಳನೀರು) ಇರುವುದೇ ಹೀಗೆ. ಕೆಂಬಣ್ಣವೋ? ಕೆಂದಾಳೆಯೋ? ಇದು ಇಂಡೋನೇಷ್ಯಾದ ಸೀಯಾಳ. ಈಗ ಭಾರತಕ್ಕೆ ಅದೂ ಮಂಗಳೂರಿಗೆ ಬಂದಿದೆ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಈ ಸಿಯಾಳ ಕಣ್ಣಿಗೆ ಬಿದ್ದಿದೆ. ಫೋಟೋ ತೆಗೆಯಲು ಹೊರಟಾಗ ಈ ಸಿಯಾಳ ನಾಚಿ ಕೆಂಪಾಯಿತೋ ಹೇಗೆ ಅಂತ ಅದರ ಹತ್ತಿರನೆ ಕೇಳಬೇಕು. ಆದರೆ, ಮೇಲ್ನೋಟಕ್ಕೆ ಇದು ಸ್ರ್ಪೇ ಪೇಯಿಂಟ್ ರೂಪದಲ್ಲಿದೆ ಎಂದು ಬರೆಯಲಾಗಿದೆ.

ಇನ್ನು ಫೋಟೋ ವೈರಲ್​ ಆಗುತ್ತಿದ್ದಂತೆ ಗುಲಾಬಿ ಬಣ್ಣದ ಎಳನೀರು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕೆಲವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದು ಗುಲಾಬಿ ಬಣ್ಣಕ್ಕೆ ಹೇಗೆ ತಿರುಗಿತು? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಇಲ್ಲಿಯವರೆಗೆ ಬಿಳಿ ಬಣ್ಣ ಬಳಿದಿರುವುದನ್ನು ನಾವು ನೋಡಿದ್ದೇವೆ, ಈಗ ಅದು ಗುಲಾಬಿ ಬಣ್ಣಕ್ಕೆ ತಿರುಗಿದೆ, ನಂತರದಲ್ಲಿ ನೀಲಿ ಬಣ್ಣಕ್ಕೆ ತಿರುಗುತ್ತದೆ ಎಂದು ತಮಾಷೆ ಮಾಡಿದ್ದಾರೆ.

ಇನ್ನು ಕೆಲವರು ಸತ್ಯವನ್ನು ತಿಳಿದುಕೊಳ್ಳುವ ಕುತೂಹಲವನ್ನು ವ್ಯಕ್ತಪಡಿಸುತ್ತಾ, ಇದರಲ್ಲಿರುವ ನೀರು ಕೂಡ ಗುಲಾಬಿ ಬಣ್ಣದ್ದೇ? ಅಥವಾ ಅದು ತಿಳಿಯಾಗಿದೆಯೇ? ಎಂದು ಕೇಳಿದ್ದಾರೆ. ವಾಸ್ತವವಾಗಿ, ಇದು ನೈಸರ್ಗಿಕ ಅಥವಾ ಕೃತಕ ಬಣ್ಣದ್ದೇ ಎಂದು ನೋಡಬೇಕಾಗಿದೆ. ಬಹುತೇಕ ಮಂದಿ ಇದು ಕೃತಕ ಬಣ್ಣ ಎನ್ನುತ್ತಿದ್ದಾರೆ. ಕಾಮೆಂಟ್​ ಬಾಕ್ಸ್​ನಲ್ಲೂ ಅನೇಕ ಮಂದಿ ಇದೇ ವಾದವನ್ನು ಮಂಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net