Sabarimala | ಅಯ್ಯಪ್ಪ ಸಂಗಮ; ಶಬರಿಮಲೆ ಅಭಿವೃದ್ದಿಗೆ 1000 ಕೋಟಿಗೂ ಅಧಿಕ ಅನುದಾನ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್!

Pinarayi Vijayan
Published on

Sabarimala: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶನಿವಾರ ಶಬರಿಮಲೆಯ ಅಭಿವೃದ್ಧಿಗೆ 1000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು.

ತಿರುವಾಂಕೂರು ದೇವಸ್ವಂ ಮಂಡಳಿಯ 75ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಜಾಗತಿಕ ಅಯ್ಯಪ್ಪ ಸಂಗಮದಲ್ಲಿ ಮಾತನಾಡಿದ ಸಿಎಂ ವಿಜಯನ್​​, ಸನ್ನಿಧಾನ, ಪಂಪಾ ಮತ್ತು ದೆವಸ್ಥಾನಕ್ಕೆ ತೆರಳುವ ಕಾಲ್ನಡಿಗೆ ಮಾರ್ಗದ ವಿವಿಧ ಹಂತಗಳ ಅಭಿವೃದ್ಧಿಗಾಗಿ ಒಟ್ಟು 1033.62 ಕೋಟಿ ಖರ್ಚು ಮಾಡಲಾಗುವುದು, ಭಕ್ತರಿಗೆ ಮೂಲಭೂತ ಸೌಲಭ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಐದು ವರ್ಷಗಳಲ್ಲಿ 300 ಕೋಟಿಗೂ ಹೆಚ್ಚು ಹಣ ಮೀಸಲಿಡಲಾಗುತ್ತದೆ ಎಂದರು.

ಶಬರಿಮಲೆ ನಿಜವಾದ ಜಾತ್ಯತೀತ ಮೌಲ್ಯಗಳನ್ನು ಸಾಕಾರಗೊಳಿಸುವ ಪುಣ್ಯಕ್ಷೇತ್ರವಾಗಿದ್ದು, ಪ್ರತಿವರ್ಷ ಜಾತಿ, ಧರ್ಮ ಮೀರಿ ಲಕ್ಷಾಂತರ ಜನ ಇಲ್ಲಿಗೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ, ವಿವಿಧ ಧರ್ಮಗಳು ಮತ್ತು ನಂಬಿಕೆಗಳು ತಮ್ಮದೇ ಆದ ಪೂಜಾ ಸ್ಥಳಗಳು ಮತ್ತು ಆಚರಣೆಗಳನ್ನು ಹೊಂದಿದ್ದರೂ ಅವೆಲ್ಲಕ್ಕಿಂತ ಶಬರಿಮಲೆ ವಿಭಿನ್ನವಾಗಿದೆ ಎಂದು ಹೇಳಿದರು. ಈ ಸಮಾವೇಶ ಆಯೋಜನೆಗೆ ವ್ಯಕ್ತವಾದ ವಿರೋಧವನ್ನು ಉಲ್ಲೇಖಿಸಿದ ವಿಜಯನ್, ಭಕ್ತರಂತೆ ವೇಷ ಧರಿಸಿದ ಕೆಲವು ವ್ಯಕ್ತಿಗಳು ಸುಪ್ರೀಂ ಕೋರ್ಟ್‌ನವರೆಗೂ ಹೋಗಿ ಸಮಾವೇಶಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದರು, ಆದರೆ, ನ್ಯಾಯಾಲಯ ಅಂತಹ ಪ್ರಯತ್ನಗಳಿಗೆ ಅವಕಾಶ ನೀಡಲಿಲ್ಲ ಎಂದರು.

ವಿಪಕ್ಷಗಳ ಟೀಕೆ..

ಕೇರಳ ಸರ್ಕಾರ ಆಯೋಜಿಸಿರುವ ಅಯ್ಯಪ್ಪ ಸಂಗಮವನ್ನು ಟೀಕಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆಗಾಗಿ ಈ ಸಮಾವೇಶವನ್ನು ನಡೆಸಲಾಗುತ್ತಿದೆ, ಮುಖ್ಯಮಂತ್ರಿಗಳು ತಂತ್ರವನ್ನು ಜನರು ಈಗಾಗಲೇ ಅರ್ಥಮಾಡಿಕೊಂಡಿದ್ದಾರೆ ಎಂದರು. 2019 ರ ಸಮಯದಲ್ಲಿ ನಡೆದ ಮಹಿಳಾ ಪ್ರವೇಶ ಆಂದೋಲನದ ವೇಳೆ, ಅದನ್ನು ವಿರೋಧಿಸಿದ ಅಯ್ಯಪ್ಪ ಭಕ್ತರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ನಡೆಸುಕೊಂಡಿದ್ದಾರೆ ಎಂದು ಆರೋಪಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net