

ನವದೆಹಲಿ: ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಟ್ರಾಫಿಕ್ ನಿಯಮಗಳ ಬಗ್ಗೆ ಅರಿವು ಮೂಡಿಸಲು ಸಾಕಷ್ಟು ಫೋಟೋ ಮತ್ತು ವಿಡಿಯೋಗಳನ್ನು ನಿತ್ಯವು ಪೋಸ್ಟ್ ಮಾಡಲಾಗುತ್ತದೆ. ಆದರೆ, ನಿಯಮಗಳ ಬಗ್ಗೆ ಮಾತನಾಡುವ ಪೊಲೀಸರೇ ಟ್ರಾಫಿಕ್ ನಿಯಮ ಉಲ್ಲಂಘಿಸುವುದು ಎಷ್ಟು ಸರಿ? ಇದಕ್ಕೆ ಸಾಕ್ಷಿಯಾಗಿ ತಾಜಾ ಫೋಟೋವೊಂದು ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿರುವ ಫೋಟೋ ಜಾಲತಾಣದಲ್ಲಿ ವೈರಲ್ ಆಗಿದೆ ರಾಹುಲ್ ಬರ್ಮನ್ ಎಂಬ ಟ್ವಿಟರ್ ಬಳಕೆದಾರ ಫೋಟೋವನ್ನು ಸೆರೆಹಿಡಿದು ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾನೆ.
ಮುಂಬೈ ಪೊಲೀಸ್ ಪ್ರತಿಕ್ರಿಯೆ
ಬೈಕ್ ನಂಬರ್ ನಮೂದಿಸಿರುವ ಬಳಕೆದಾರ, ನಾವು ಈ ರೀತಿನ ಬೈಕ್ ಚಲಾಯಿಸಿದರೆ ಏನಾಗುತ್ತೆ? ಇದು ಸಂಚಾರಿ ನಿಯಮ ಉಲ್ಲಂಘನೆಯಲ್ಲವೇ? ಎಂದು ರಾಹುಲ್ ಬರ್ಮನ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಂಬೈ ಟ್ರಾಫಿಕ್ ಪೊಲೀಸ್ ಇಲಾಖೆ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಈ ಫೋಟೋವನ್ನು ಮಾತುಂಗ ಸಂಚಾರಿ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳಿಗೆ ಕಳುಹಿಸಿದ್ದೇವೆ ಎಂದಿದೆ.
ಡಾ ಬಾಕ್ಸರ್ ಹೆಸರಿನ ಮತ್ತೊಬ್ಬ ಟ್ವಿಟರ್ ಬಳಕೆದಾರ ಪೊಲೀಸ್ ಅಧಿಕಾರಿಯೊಬ್ಬರು ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸುತ್ತಿರುವ ಫೋಟೋವನ್ನು ಪೋಸ್ಟ್ ಮಾಡಿ, ಎರಡು ದಿನಗಳ ಹಿಂದಷ್ಟೇ ಪೂರ್ವ ಮುಂಬೈನ ಗೋರೆಗಾಂವ್ ಪ್ರದೇಶದ ಸುಬೆರಾಯ್ ಮಾಲ್ ರಸ್ತೆಯಲ್ಲಿ ಈ ಫೋಟೋವನ್ನು ಸೆರೆಹಿಡಿದೆ ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರಿಂದ ಪಾಠ
ಪೊಲೀಸರ ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ನಾವು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಓಡಿಸಿದರೆ, ನೋಂದಾಯಿತ ಮೊಬೈಲ್ ಸಂಖ್ಯೆಗೆ ಕೆಲವೇ ಗಂಟೆಗಳಲ್ಲಿ ನಾವು ದಂಡವನ್ನು ಚಲನ್ ಅನ್ನು ಪಡೆಯುತ್ತೇವೆ. ಆದರೆ, ಇವರಿಗೆ ಮಾತ್ರ ನಿಯಮಗಳನು ಅನ್ವಯ ಆಗುವುದಿಲ್ಲ ಎಂದು ನೆಟ್ಟಿಗರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ. ನಿಮ್ಮದೇ ಇಲಾಖೆಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಂಡು ಸಮಾಜಕಕ್ಕೆ ಒಳ್ಳೆಯ ಉದಾಹರಣೆಯಾಗಿ ಎಂದು ಮತ್ತೊಬ್ಬ ನೆಟ್ಟಿಗ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)