ಶಬರಿಮಲೆಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್​ ಮಾಡಿಸಿದ ಪೊಲೀಸರಿಗೆ ಬಿಗ್​ ಶಾಕ್​! Sabarimala Temple

Sabarimala Temple
Published on

Sabarimala Temple : ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯ 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋಶೂಟ್ ಮಾಡಿಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಫೋಟೋಗಳು ವೈರಲ್​ ಆಗಿ, ಭಕ್ತರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇರಳದ ಎಡಿಜಿಪಿ ಕ್ರಮ ಜರುಗಿಸಿದ್ದಾರೆ.

ಕಣ್ಣೂರಿನ ‘ಕೆಎಪಿ 4’ ಶಿಬಿರದಲ್ಲಿ ಉತ್ತಮ ಅಭ್ಯಾಸ ನಡೆಸುವಂತೆ ಫೋಟೋಶೂಟ್​ನಲ್ಲಿ ಭಾಗಿಯಾದ ಎಸ್​ಎಪಿ ಶಿಬಿರದ 23 ಪೊಲೀಸರಿಗೆ ಕೇರಳದ ಎಡಿಜಿಪಿ ಎಸ್.ಶ್ರೀಜಿತ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಸಂಬಂಧ ನಾಳೆ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗುವುದು ಎಂದು ಎಡಿಜಿಪಿ ತಿಳಿಸಿದ್ದಾರೆ.

ಭಕ್ತಾದಿಗಳು ಮಾತ್ರವಲ್ಲದೆ, ಹಿಂದು ಐಕ್ಯವೇದಿ, ವಿಶ್ವ ಹಿಂದು ಪರಿಷತ್​, ದೇವಾಲಯ ಸಂರಕ್ಷಣಾ ಸಮಿತಿ, ಆಚಾರ್ ರಕ್ಷಣಾ ಸಮಿತಿಗಳು ಪೊಲೀಸರು ನಡೆಯನ್ನು ತೀವ್ರವಾಗಿ ಖಂಡಿಸಿವೆ. ಈ ಸಂಬಂಧ ವಿಶ್ವ ಹಿಂದು ಪರಿಷತ್‌ ಹೈಕೋರ್ಟ್‌ಗೆ ಅರ್ಜಿ ಸಹ ಸಲ್ಲಿಸಿದೆ. ಇನ್ನೊಂದೆಡೆ ಕೇರಳದಲ್ಲಿ ತೀವ್ರ ಪ್ರತಿಭಟನೆ ಕೂಡ ನಡೆದವು. ಈ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅವರ ವಿರುದ್ಧ ಮತ್ಯಾವ ಕ್ರಮ ಜರುಗಿಸುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಅಂದಹಾಗೆ ಈ ಘಟನೆ ಶನಿವಾರ (ನ.23) ಮಧ್ಯಾಹ್ನ ನಡೆದಿದೆ. ಒಂದು ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಿದ ನಂತರ,  ಪೊಲೀಸರು 18 ಮೆಟ್ಟಿಲುಗಳ ಮೇಲೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ನಂತರ ಪೊಲೀಸರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.

ಮುಡಿಯನ್ನು ಕಟ್ಟದೆ 18 ಮೆಟ್ಟಿಲು ಹತ್ತುವಂತಿಲ್ಲ. ಪಠಿಂತಂಪಾಡಿಯು ಪುಣ್ಯಕ್ಷೇತ್ರದಷ್ಟೇ ಪವಿತ್ರವೆಂದು ಭಕ್ತರಿಂದ ಪರಿಗಣಿಸಲ್ಪಟ್ಟ ಸ್ಥಳವಾಗಿದೆ. ಪಂದಳಂ ರಾಜನ ಪ್ರತಿನಿಧಿಗೆ ಮಾತ್ರ ಮುಡಿ ಕಟ್ಟದೆ 18 ಮೆಟ್ಟಿಲು ಏರುವ ಹಕ್ಕಿದೆ. ಮೆಟ್ಟಿಲುಗಳ ಬದಿಯಲ್ಲಿ ನಿಂತು ಮೆಟ್ಟಿಲುಗಳನ್ನು ಹತ್ತಲು ಪೊಲೀಸರು ಯಾತ್ರಾರ್ಥಿಗಳಿಗೆ ಸಹಾಯ ಮಾಡುತ್ತಾರೆ. ದೇವಸ್ಥಾನದಲ್ಲಿ ಛಾಯಾಗ್ರಹಣವನ್ನೂ ನಿಷೇಧಿಸಲಾಗಿದೆ. ಇದರ ಹೊರತಾಗಿಯೂ ಕೆಲವು ಯಾತ್ರಿಕರು ತಮ್ಮ ಮೊಬೈಲ್‌ನಲ್ಲಿ ಫೋಟೋ ತೆಗೆಯುತ್ತಾರೆ.

ಪೊಲೀಸರ ಫೋಟೋಶೂಟ್​ ವಿರುದ್ಧ ವಿಶ್ವ ಹಿಂದು ಪರಿಷತ್‌ ಹರಿಹಾಯ್ದಿದೆ. ಹದಿನೆಂಟು ಮೆಟ್ಟಿಲನ್ನು ಅಯ್ಯಪ್ಪ ಭಕ್ತರು ಆಶೀರ್ವಾದ ಎಂದು ಪರಿಗಣಿಸುತ್ತಾರೆ. ಒಂದೊಂದು ಮೆಟ್ಟಿಲಿಗೂ ಒಂದೊಂದು ಅರ್ಥವಿದೆ. 18 ಮೆಟ್ಟಿಲನ್ನು ಇಳಿಯುವಾಗಲೂ ಭಕ್ತರು ದೇವರಿಗೆ ಬೆನ್ನು ತೋರುವುದಿಲ್ಲ. ಹೀಗಿರುವಾಗ ಪೊಲೀಸರು ಈ ರೀತಿ ಮಾಡಬಹುದೇ ಎಂದು ವಿಶ್ವ ಹಿಂದು ಪರಿಷತ್ ಕೇರಳ ಘಟಕ ಪ್ರಶ್ನಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net