

Keerthy Suresh : ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್, ಸೂರ್ಯ, ವಿಕ್ರಮ್, ಶಿವಕಾರ್ತಿಕೇಯನ್, ನಾನಿ, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್ ನಟನೆಯ ಡಬ್ಬಿಂಗ್ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.
ಸದ್ಯ ಬಾಲಿವುಡ್ಗೂ ಕೀರ್ತಿ ಸುರೇಶ್ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್ ನಟನೆಯ ಬೇಬಿ ಜಾನ್ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್ ನಟನೆಯ ಸೂಪರ್ ಹಿಟ್ ತಮಿಳು ಸಿನಿಮಾ ಥೇರಿ ರಿಮೇಕ್. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.
ಮೊನ್ನೆಯಷ್ಟೇ ಬೇಬಿ ಜಾನ್ ಸಿನಿಮಾದ ಡುಯೆಟ್ ಸಾಂಗ್ ಒಂದು ಬಿಡುಗಡೆಯಾಗಿದೆ. ಆ ಹಾಡನ್ನು ನೋಡಿದವರು ಹುಬ್ಬೇರಿಸಿದ್ದಾರೆ. ಏಕೆಂದರೆ, ಹೆಚ್ಚಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳದ ಕೀರ್ತಿ, ಬೇಬಿ ಜಾನ್ ಸಿನಿಮಾದ ಹಾಡಿನಲ್ಲಿ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅರೆಬರೆ ಬಟ್ಟೆ ಧರಿಸಿ ಮೈಚಳಿ ಬಿಟ್ಟು ಕುಣಿದಿದ್ದಾರೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೀರ್ತಿ ಸುರೇಶ್ ಅವತಾರವನ್ನು ಕಂಡು ಇದೆಲ್ಲ ಬಾಲಿವುಡ್ ಮಹಿಮೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಕೀರ್ತಿ ಸುರೇಶ್ ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ತನ್ನ ಸ್ನೇಹಿತ ಆಂಟೋನಿ ಥಟ್ಟಿಲ್ ಅವರನ್ನು ಕೀರ್ತಿ ಸುರೇಶ್ ವಿವಾಹ ಆಗಲಿದ್ದಾರೆ. ಡಿಸೆಂಬರ್ 11 ಮತ್ತು 12ರಂದು ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಕೀರ್ತಿ ಸುರೇಶ್ ಅವರಿಂದ ಯಾವುದೇ ಅಧಿಕೃತ ಘೋಷಣೆ ಈವರೆಗೂ ಬಂದಿಲ್ಲ. (ಏಜೆನ್ಸೀಸ್)