ಫೋನ್​ ಟ್ಯಾಪ್ ಕೇಸ್: ಶಾಸಕ ಬೆಲ್ಲದ್​ರ ಪರಿಚಯಸ್ಥರೇ ಕರೆ ಮಾಡಿದ್ದು ದೃಢ

bellad
Published on

ಬೆಂಗಳೂರು : ಶಾಸಕ ಅರವಿಂದ್​ ಬೆಲ್ಲದ್ ಫೋನ್ ಟ್ಯಾಪಿಂಗ್(ಕದ್ದಾಲಿಕೆ) ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶಾಸಕರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಯುವರಾಜ್ ಸ್ವಾಮಿ ಕರೆ ಮಾಡಿಲ್ಲ ಎಂಬುದು ತನಿಖೆ ವೇಳೆ ಖಚಿತವಾಗಿದೆ. ಅಷ್ಟೇ ಅಲ್ಲ, ಶಾಸಕರಿಗೆ ಪರಿಚಯವಿರುವವರೇ ಕರೆ ಮಾಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರ ವಿಭಾಗದ ಅಧಿಕಾರಿಗಳು ನಿನ್ನೆ ಶಾಸಕ ಅರವಿಂದ್ ಬೆಲ್ಲದ್​​ರನ್ನು ಮತ್ತೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಕರೆ ಮಾಡಲಾಗಿದ್ದ ನಂಬರ್ ಹಾಗೂ ಹೆಚ್ಚುವರಿ ಮಾಹಿತಿ ಪಡೆದ ಪೊಲೀಸರು, ಈ ಮಾಹಿತಿ ಆಧರಿಸಿ, ಹೈದ್ರಾಬಾದ್​ ಮೂಲದ ಅರ್ಚಕ ಜಿತೇಂದ್ರನಾಥ್​ ಎಂಬುವರ ವಿಚಾರಣೆ ನಡೆಸಿದ್ದಾರೆ. ಈ ಅರ್ಚಕರಿಗೆ ಕರೆ ಮಾಡಿ, ಫೋನ್ ಟ್ಯಾಪಿಂಗ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಆತ, ಶಾಸಕ ಬೆಲ್ಲದ್​​ಗೆ ಪರಿಚಯಸ್ಥ ಅನ್ನೋದು ದೃಢವಾಗಿದೆ ಎನ್ನಲಾಗಿದೆ.

ಶಾಸಕರು ನೀಡಿದ ನಂಬರ್ ಆಧರಿಸಿ ತನಿಖೆ ನಡೆಸುತ್ತಿರುವ ಡಿಸಿಪಿ ಅನುಚೇತ್ ನೇತೃತ್ವದ ಪೊಲೀಸ್​ ತಂಡಕ್ಕೆ ಈ ಕರೆಗೂ ಜೈಲಿನಲ್ಲಿರುವ ಯುವರಾಜ್​​ಗೂ ಯಾವುದೇ ಸಂಬಂಧ ಇಲ್ಲ ಎಂಬುದು ಆತನ ವಿಚಾರಣೆಯಿಂದ ಖಚಿತವಾಗಿದೆ. ಹೈದ್ರಾಬಾದ್ ಮೂಲದ ವ್ಯಕ್ತಿಯಿಂದ ಕರೆ ಬಂದಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಪ್ರಕರಣದ ತನಿಖೆಯನ್ನು ಮುಗಿಸಿರುವ ಅಧಿಕಾರಿಗಳು, ಇದೇ ಆಧಾರದ ಮೇಲೆ ಪೊಲೀಸ್​ ಆಯುಕ್ತರಿಗೆ ವರದಿ ನೀಡಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net