ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ತ್ಯಾಗದ ಮೂಲಕ ಇನ್ನೊಬ್ಬರ ದುಃಖಕ್ಕೆ ಸ್ಪಂದಿಸಿ ನೀಡುವ ಸೇವೆಯನ್ನು ದೇವರು ಮೆಚ್ಚುತ್ತಾನೆ. ಪರೋಪಕಾರ ಎಂಬುದು ಮಹೋನ್ನತ ತ್ಯಾಗವಾಗಿದ್ದು, ಈ ಧ್ಯೇಯದಡಿ ಶೌರ್ಯ ವಿಪತ್ತು ನಿರ್ವಹಣೆ ತಂಡ ನೀಡುತ್ತಿರುವ ಸೇವೆ ಶ್ಲಾಘನೀಯವಾದದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಬುಧವಾರ ಎಸ್ಕೆಡಿಆರ್ಡಿಪಿ ಕೇಂದ್ರ ಕಚೇರಿಯಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹಾಗೂ ಜನಜಾಗೃತಿ ಪ್ರಾದೇಶಿಕ ವಿಭಾಗದ ವತಿಯಿಂದ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಗಳ ರಾಜ್ಯಮಟ್ಟದ ಮಾಸ್ಟರ್ ಮತ್ತು ಕ್ಯಾಪ್ಟನ್ಗಳ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಾಹಸ ಪ್ರವೃತ್ತಿಯನ್ನು ಸಂಟನೆಗಳ ಮೂಲಕ ಮೈಗೂಡಿಸಿಕೊಳ್ಳಬಹುದು. ಸೇವೆ ಮಾಡಲು ಉತ್ಸಾಹ, ಸ್ಫೂರ್ತಿ, ಸಾಹಸ ಪ್ರವೃತ್ತಿ ಇರಬೇಕು. ನಮ್ಮನ್ನು ನಾವು ರಸಿಕೊಂಡು ಸೇವೆ ನೀಡಬೇಕು. ಆಪತ್ಕಾಲದಲ್ಲಿ ಮೊಬೈಲ್ಗಳಲ್ಲಿ ಶೂಟಿಂಗ್ ಮಾಡುವ ಬದಲು ರಕ್ಷಣೆಗೆ ಧಾವಿಸಿ. ಸಣ್ಣ ಸೇವೆಗಳು ಇನ್ನೊಬ್ಬರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಯೋಜನೆಯ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಶೌರ್ಯ ತಂಡದ ಸ್ವತಂತ್ರ ಸೇವೆ ಅತ್ಯಮೂಲ್ಯವಾದದ್ದು. ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪ್ರೇರಣೆಯಿಂದ ಆರಂಭವಾದ ಈ ತಂಡ ಎನ್ಡಿಆರ್ಎಫ್ ಬಳಿಕ ರಾಜ್ಯದಲ್ಲಿ ದೊಡ್ಡ ಪಡೆಯಾಗಿ ಹೊರಹೊಮ್ಮಿದೆ ಎಂದರು.
ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಶೌರ್ಯ ನಡೆದು ಬಂದ ದಾರಿಯ ಕುರಿತು ವಿವರ ನೀಡಿದರು. ಯೋಜನಾಧಿಕಾರಿ ಗಣೇಶ ಆಚಾರ್ಯ ನಿರೂಪಿಸಿದರು.
ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಕಾಳಜಿಯಿಂದ 2020ರ ಜೂನ್ 21ರಂದು ಆಪತ್ಕಾಲದಲ್ಲಿ ಸ್ಥಳಿಯವಾಗಿ ಕ್ಷಿಪ್ರ ಸೇವೆ ನೀಡುವ ನಿಟ್ಟಿನಲ್ಲಿ ಆರಂಭವಾದ ಶೌರ್ಯ ವಿಪತ್ತು ನಿರ್ವಹಣೆ ತಂಡದಲ್ಲಿ ಪ್ರಸ್ತುತ 10,500 ಸ್ವಯಂಸೇವಕರಿದ್ದಾರೆ. ವಿಪತ್ತು ಸೇವೆ, ಸಾಮಾಜಿಕ ಸೇವೆ, ವೈಯಕ್ತಿಕ ಸೇವೆ, ಗುರುತಿಸುವಿಕೆ, ವ್ಯಕ್ತಿತ್ವ ವಿಕಸನ ಎಂಬ ಪಂಚ ಸೂತ್ರಗಳೊಂದಿಗೆ ತಂಡ ಬೆಂಕಿ ಅವಡ, ಕಾಡ್ಗಿಚ್ಚು, ಅಪಘಾತ, ನೆರೆ, ಗುಡ್ಡ ಕುಸಿತ, ಉರಗ ರಕ್ಷಣೆ, ಸ್ವಚ್ಛತೆ ಇತ್ಯಾದಿ ಅಗತ್ಯ ಸಂದರ್ಭ ತ್ವರಿತ ಸೇವೆ ನೀಡುತ್ತದೆ. ಈ ಸೇವೆ ರಾಜ್ಯದ 91 ತಾಲೂಕುಗಳಲ್ಲಿ 638 ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ. ಪ್ರತಿ ತಾಲೂಕಿನಲ್ಲಿ 100ರಿಂದ 200 ಶೌರ್ಯ ಸ್ವಯಂಸೇವಕರು ಇದ್ದು ರಾಜ್ಯದಲ್ಲಿ 14 ಕ್ಷಿಪ್ರ ತಂಡಗಳು ಕಾರ್ಯಾಚರಿಸುತ್ತಿವೆ.