ಅಮ್ಮನ ಹೆಸರಿನಲ್ಲಿ ಒಂದು ಮರ ಕಾರ್ಯಕ್ರಮಕ್ಕೆ ಚಾಲನೆ

gida
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಸ್ವಚ್ಛಾ ಹೀ ಸೇವಾ ಅಭಿಯಾನ 2024ರ ಅಡಿ ಅಮ್ಮನ ಹೆಸರಿನಲ್ಲಿ ಒಂದು ಮರ ನೆಡುವ ಕಾರ್ಯಯೋಜನೆಯಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪೆರ್ನೆ ಎಂಬಲ್ಲಿ ಹೆದ್ದಾರಿ ಮಧ್ಯ ಹಾಗೂ ಹೆದ್ದಾರಿ ಪಾರ್ಶ್ವದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಭಿವೃದ್ಧಿ ಪ್ರಾಧಿಕಾರದ ತೋಟಗಾರಿಕಾ ಅಧಿಕಾರಿ ಆಶಿಕಾ ಮಾತನಾಡಿ, ಹೆದ್ದಾರಿ ಅಗಲೀಕರಣದ ಕಾಮಗಾರಿಯಿಂದ ಬಹಳಷ್ಟು ಮರಗಳನ್ನು ಅನಿವಾರ್ಯ ನೆಲೆಯಲ್ಲಿ ಕಡಿಯಲಾಗಿದೆ. ಅದರ ದುಪ್ಪಟ್ಟು ಮರಗಳನ್ನು ನೆಟ್ಟು ಬೆಳೆಸುವ ಹೊಣೆಗಾರಿಕೆ ನಮ್ಮದಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಭಾಗದಲ್ಲಿ ಸಾಧಾರಣ ಗಾತ್ರದ ಗಿಡ ಮರಗಳನ್ನು ಬೆಳೆಸಲಾಗುತ್ತಿದ್ದರೆ, ಹೆದ್ದಾರಿಯ ಉಭಯ ಪಾರ್ಶ್ವದಲ್ಲಿ ಪ್ರಯೋಜನಕಾರಿ ಮರಗಳನ್ನು ನೆಟ್ಟು ಬೆಳೆಸಲಾಗುವುದು. ಸಾರ್ವಜನಿಕರೂ ಕೂಡ ಎಲ್ಲೆಲ್ಲಿ ಮರಗಿಡಗಳನ್ನು ಬೆಳೆಸಲು ಸಾಧ್ಯವಿದೆಯೋ ಅಲ್ಲೆಲ್ಲಾ ಗಿಡ ಮರಗಳನ್ನು ನೆಟ್ಟು ಬೆಳೆಸಬಹುದೆಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಪ್ರಸಕ್ತ 1.5 ಕಿ.ಮೀ. ವ್ಯಾಪ್ತಿಯಲ್ಲಿ ಹೆದ್ದಾರಿ ಮಧ್ಯದಲ್ಲಿ ಗಿಡ ಮರಗಳನ್ನು ನೆಡಲಾಯಿತು. ಹೆದ್ದಾರಿಯುದ್ದಕ್ಕೂ ಎರಡೂ ಪಾರ್ಶ್ವದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡಲಾಯಿತು.

ಕೆಎನ್‌ಆರ್ ಸಂಸ್ಥೆಯ ರೆಸಿಡೆನ್ಶಿಯಲ್ ಇಂಜಿನಿಯರ್ ವಿವೇಕಾನಂದ ಮಠಪತಿ, ಪ್ರಾಜೆಕ್ಟ್ ಮ್ಯಾನೇಜರ್ ರಘುನಾಥ ರೆಡ್ಡಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net