

ಬೆಂಗಳೂರು: ಲೈಟ್ಸ್, ಕ್ಯಾಮೆರಾಗಳು ಆಫ್ ಆಗಿ ಮೂಲೆ ಸೇರಿದ್ದವು. ಚಿತ್ರರಂಗದ ಮಂದಿ, ಆಕ್ಷನ್ ಎಂಬ ಪದ ಕೇಳಿ ಅದೆಷ್ಟು ದಿನಗಳಾಗಿದ್ದವೋ ಗೊತ್ತಿಲ್ಲ. ಹೀಗೆ ಲಾಕ್ಡೌನ್ನಿಂದ ಮನೆಯಲ್ಲೇ ಲಾಕ್ಡೌನ್ ಆಗಿದ್ದ ಸಿನಿಮಾದವರಿಗೆ, ಚಿತ್ರೀಕರಣ ಮಾಡಿ ಎಂದು ಸರ್ಕಾರ ಅನುಮತಿ ನೀಡಿ ಒಂದು ತಿಂಗಳ ಮೇಲಾಗಿದೆ. ಆದರೂ ಕರೊನಾ ಹಾವಳಿಯಿಂದಾಗಿ ಬಹಳಷ್ಟು ಜನ ಚಿತ್ರೀಕರಣ ಮುಂದೆ ಬರುತ್ತಿಲ್ಲ. ಒಂದು ದೊಡ್ಡ ಚಿತ್ರದ ತಂಡದವರು ಧೈರ್ಯದಿಂದ ಮುಂದೆ ಬಂದು, ಕೆಲಸ ಪ್ರಾರಂಭಿಸಿದರೆ ಬೇರೆಯವರು ಸಹ ಶುರು ಮಾಡಬಹುದು ಎಂದು ಚಿತ್ರರಂಗ ಕಾಯುತ್ತಿದ್ದರೂ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇದೀಗ ಸುದೀಪ್, ‘ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಉತ್ತರ ಕೊಟ್ಟಿದ್ದಾರೆ.
‘ಫ್ಯಾಂಟಮ್ ಚಿತ್ರೀಕರಣ ಫೆಬ್ರವರಿಯಲ್ಲೇ ಹೈದರಾಬಾದ್ನಲ್ಲಿ ಪ್ರಾರಂಭವಾಗಿತ್ತು. ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲೇ ಚಿತ್ರತಂಡದವರೆಲ್ಲಾ, ಬೆಂಗಳೂರಿಗೆ ವಾಪಸ್ಸಾಗಿದ್ದರು. ಈಗ ಚಿತ್ರತಂಡದವರು ಗುರುವಾರದಿಂದ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ವಿಶೇಷವೆಂದರೆ, ಚಿತ್ರಕ್ಕಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಮೂರು ಫ್ಲೋರ್ಗಳನ್ನು ಕಾಯ್ದಿರಿಸಿ, ಅಲ್ಲಿ ಕಾಡಿನ ಸೆಟ್ ನಿರ್ವಿುಸಿ ಚಿತ್ರೀಕರಣ ಮಾಡಲಾಗುತ್ತಿದೆ. ಬರೀ ಕಾಡಷ್ಟೇ ಅಲ್ಲ, ಜಲಪಾತ, ಸೇತುವೆ, ಗುಡಿಸಲುಗಳನ್ನು ಸಹ ನಿರ್ಮಾಣ ಮಾಡಲಾಗಿದೆ ಎನ್ನುತ್ತಾರೆ ನಿರ್ವಪಕ ಜಾಕ್ ಮಂಜು.
ಕಾಡಿನ ಸೆಟ್ ಆದ್ದರಿಂದ, ರಾಜಮಂಡ್ರಿಯಿಂದ 50 ಲಕ್ಷ ಮೌಲ್ಯದ ಗಿಡಗಳನ್ನು ತರಿಸಿ, ಕಳೆದೊಂದು ತಿಂಗಳಿನಿಂದ ಸೆಟ್ ಕೆಲಸವನ್ನು ಪೂರ್ತಿಗೊಳಿಸಲಾಗಿದೆ. ಇನ್ನು ಕರ್ನಾಟಕದ ಕಾರ್ವಿುಕರನ್ನಿಟ್ಟುಕೊಂಡೇ ಚಿತ್ರದ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಮಂಜು, ‘ಕರ್ನಾಟಕ ಚಲನಚಿತ್ರ ಕಾರ್ವಿುಕರ ಮತ್ತು ತಂತ್ರಜ್ಞರ ಒಕ್ಕೂಟದವರು ಫೋನ್ ಮಾಡಿ, ನಮ್ಮ ಕಾರ್ವಿುಕರಿಗೆ ಕೆಲಸ ಕೊಡಿ ಎಂದು ಕೇಳಿಕೊಂಡಿದ್ದರು. ಸುದೀಪ್ ಅವರು ಸಹ ಎಲ್ಲರನ್ನೂ ಇಲ್ಲಿಂದಲೇ ಕರೆದುಕೊಂಡು ಹೋಗಿ ಎಂದಿದ್ದರು. ಸುಮಾರು 200 ಜನರನ್ನು ಬೆಂಗಳೂರಿನಿಂದ ಕರೆದುಕೊಂಡು ಬಂದಿದ್ದೇವೆ’ ಎನ್ನುತ್ತಾರೆ ಮಂಜು. ‘ಫ್ಯಾಂಟಮ್ ಚಿತ್ರದಲ್ಲಿ ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನಮಾಡುತ್ತಿರುವವರು ‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.