ಜಾತಿಗಣತಿಗೆ ತಡೆ ಕೋರಿ ಹೈಕೋರ್ಟ್​ಗೆ ಅರ್ಜಿ: ಸಮೀಕ್ಷೆಯ ಭವಿಷ್ಯ ನಾಳೆ ಮಧ್ಯಾಹ್ನ ನಿರ್ಧಾರ! Caste Census

Caste Census
Published on

Caste Census : ಜಾತಿಗಣತಿಗೆ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್​) ವಿಚಾರಣೆ ನಡೆಸಿದ ಹೈಕೋರ್ಟ್​ ನಾಳೆ (ಸೆ.23) ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸ್ಥಿತಿ ಸಮೀಕ್ಷೆ (ಜಾತಿ ಗಣತಿ) ಇಂದಿನಿಂದ (ಸೆ.22) ಆರಂಭವಾಗಿದೆ. ಆದರೆ, ಇದನ್ನು ವಿರೋಧಿಸಿ ಪಿಐಎಲ್​ ದಾಖಲಾಗಿದ್ದು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ಪೀಠದಲ್ಲಿ ವಿಚಾರಣೆ ಇಂದು (ಸೆ.22) ನಡೆಯಿತು. ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡನೆ ಮಾಡಿದರು.

ರಾಜ್ಯದಲ್ಲಿ ಸರ್ಕಾರ ಜಾತಿ ಗಣತಿಗೆ ಆದೇಶಿಸಿದೆ. ಆದರೆ, ಇದು ಸಂವಿಧಾನದ ಆರ್ಟಿಕಲ್ 342A(3) ಗೆ ವಿರುದ್ಧವಾಗಿದೆ. ಹಿಂದುಳಿದ ವರ್ಗಗಳ ಆಯೋಗದ‌ ಹಿಂದಿನ ವರದಿ ಪರಿಗಣಿಸದೇ ಹೊಸ ಪ್ರಕ್ರಿಯೆ, ಜಾತಿಗಣತಿಯ ಅಂಕಿ ಅಂಶಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ಆಧಾರ್​ಗೆ ಲಿಂಕ್ ಮಾಡುತ್ತಿದ್ದಾರೆ. ಸರ್ಕಾರದ ಈ ಕ್ರಮ ಕಾನೂನುಬಾಹಿರವೆಂದು ವಾದಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಹೈಕೋರ್ಟ್​ ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಸದ್ಯಕ್ಕೆ ಸರ್ವೆ ಕಾರ್ಯ ಮುಂದೂಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿತು.

ಈ ವೇಳೆ ಸರ್ಕಾರದ ಪರವಾಗಿ ತಮ್ಮ ವಾದ ಮಂಡನೆ ಮಾಡಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಈ ರೀತಿಯ ಹಳೆಯ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿಲ್ಲ. ಹೀಗಾಗಿ ಈ ಗಣತಿಗೆ ತಡೆ ನೀಡಬಾರದು. ಅಷ್ಟಕ್ಕೂ ಇದು ಜನಗಣತಿಯಲ್ಲ, ಕೇವಲ ಸಮೀಕ್ಷೆ ಮಾಡುತ್ತಿದ್ದೇವೆ. ಆದ್ದರಿಂದ ಸಮೀಕ್ಷೆಗೆ ಮಧ್ಯಂತರ ತಡೆ ನೀಡಬಾರದೆಂದು ಮನವಿ ಮಾಡಿದರು. ಅಲ್ಲದೆ, ಅಂಕಿ-ಅಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಸರ್ಕಾರ ಸಮೀಕ್ಷೆ ಮೂಲಕ ಅಂಕಿ-ಅಂಶವನ್ನು ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.

ವಾದ ಮುಂದುವರಿಸಿದ ಮನು ಸಿಂಘ್ವಿ, ಬೇಕಾದರೆ, ದಸರಾ ಬಳಿಕ ಅಂತಿಮ ವಿಚಾರಣೆಯನ್ನು ನಡೆಸಬಹುದು. ಆದರೆ, ಸದ್ಯಕ್ಕೆ ಮಧ್ಯಂತರ ತಡೆ ಅವಶ್ಯಕತೆ ಇಲ್ಲ ಎಂದರು. ಈ ವೇಳೆ ನ್ಯಾಯಾಲಯ ಈಗ ಸರ್ವೆಗೆ ಅವಕಾಶ ನೀಡಿದರೆ ಅಂಕಿ-ಅಂಶ ಸಂಗ್ರಹವಾಗುತ್ತದೆ ಮತ್ತು ಒಮ್ಮೆ ಅಂಕಿ ಅಂಶ ಸಂಗ್ರಹವಾದರೆ, ಅದನ್ನು ಮರಳಿಸಲು ಸಾಧ್ಯವಿಲ್ಲ ‌ಹೀಗಾಗಿ, ನಾಳೆ‌ ಮಧ್ಯಾಹ್ನ 2.30ಕ್ಕೆ ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆ ನಡೆಸುವುದಾಗಿ ನ್ಯಾಯ ಪೀಠ ತಿಳಿಸಿದೆ. ಹೀಗಾಗಿ, ಜಾತಿಗಣತಿಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net