VIDEO: ಟಿಕ್​ಟಾಕ್​ನಲ್ಲಿ ನಾಯಿಗೆ ಚಿತ್ರಹಿಂಸೆ: ಯುವಕರ ಹಿಡಿದುಕೊಟ್ಟರೆ ₹ 50 ಸಾವಿರ ಬಹುಮಾನ!

dogweb
Published on

ನವದೆಹಲಿ: ಯುವಕರಿಬ್ಬರು ನಾಯಿಗೆ ಚಿತ್ರಹಿಂಸೆ ನೀಡಿ ಅದನ್ನು ನೀರಿನಲ್ಲಿ ಎಸೆದು ಅದನ್ನು ಟಿಕ್​ಟಾಕ್​ ಮೂಲಕ ವೀಡಿಯೋ ಮಾಡಿ ಹರಿಬಿಟ್ಟಿರುವ ದೃಶ್ಯ ಈಚೆಗೆ ಭಾರಿ ವೈರಲ್​ ಆಗಿತ್ತು.

ಇಬ್ಬರು ಯುವಕರು ನಾಯಿಯ ಕಾಲುಗಳಿಗೆ ಹಗ್ಗಕಟ್ಟಿ ಅದನ್ನು ನೀರಿಗೆ ಎಸೆದು ವಿಕೃತಿ ಮೆರೆದಿದ್ದರು. ಇದನ್ನು ಟಿಕ್​ಟಾಕ್​ನಲ್ಲಿ ವೀಡಿಯೋ ಮಾಡಲಾಗಿತ್ತು.

ಇದು ಭಾರಿ ವೈರಲ್​ ಆಗುತ್ತಿದ್ದಂತೆಯೇ ದೇಶಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಟಿಕ್​ಟಾಕ್​ ಬ್ಯಾನ್​ ಮಾಡುವ ಕೂಗು ಕೇಳುತ್ತಿರುವಾಗಲೇ ಇಂಥದ್ದೊಂದು ವಿಕೃತ ಮನೋಭಾವದ ವೀಡಿಯೋ ನೋಡಿದ ಜನರು ಕಿಡಿ ಕಾರಿದ್ದರು. ಆ ಮೂಕ ಪ್ರಾಣಿ ಅನುಭವಿಸಿರುವ ನೋವಿಗೆ ತುಂಬಾ ಮಂದಿ ಸಂಕಟ ಪಟ್ಟಿದ್ದರು.

ಇದೀಗ ಈ ವೀಡಿಯೋ ಪ್ರಾಣಿ ದಯಾ ಸಂಘವನ್ನು (ಪೇಟಾ) ಕೆರಳಿಸಿದೆ. ಮಧ್ಯಪ್ರದೇಶದ ಉಜ್ಜೈನ್​ನಲ್ಲಿ ಪೇಟಾ ಈ ಯುವಕರ ವಿರುದ್ಧ ಪೊಲೀಸರಲ್ಲಿ ದೂರು ದಾಖಲು ಮಾಡಿದೆ. ಈ ಯುವಕರ ಗುರುತು ಹುಡುಕಿಕೊಟ್ಟವರಿಗೆ 50 ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಪೇಟಾ ಘೋಷಿಸಿದೆ. ಪೇಟಾ ನೀಡಿರುವ ದೂರಿನ ಅನ್ವಯ ಪೊಲೀಸರು ಯುವಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

ಈ ವೀಡಿಯೋ ಮಾಡಿದವರು ಯಾರು? ಇದು ನಡೆದ ಸ್ಥಳ ಎಲ್ಲಿ ಎಂಬ ಬಗ್ಗೆ ಸದ್ಯ ಪೊಲೀಸರಿಗೂ ಯಾವುದೇ ಮಾಹಿತಿ ಇಲ್ಲ. ಯುವಕರು ಹಿಂದಿಯಲ್ಲಿ ಮಾತನಾಡುತ್ತಿದ್ದುದು ಬಿಟ್ಟರೆ ಬೇರಾವ ಮಾಹಿತಿಯೂ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಇದು ಈಗಾಗಲೇ ಸಿಕ್ಕಾಪಟ್ಟೆ ವೈರಲ್​ ಆಗಿರುವ ಕಾರಣ, ಹಾಗೂ ಯುವಕರ ಮುಖ ಸ್ಪಷ್ಟವಾಗಿ ಕಾಣುವ ಹಿನ್ನೆಲೆಯಲ್ಲಿ, ಈ ಬಗ್ಗೆ ಯಾರಿಗೇ ತಿಳಿದರೂ ಕೂಡಲೇ ಅವರು, ಪೇಟಾದ ಸಂಖ್ಯೆ +91 9820122602 ಗೆ ಕರೆ ಮಾಡುವ ಮೂಲಕ ಇಲ್ಲವೇ ಇ ಮೇಲ್​ ವಿಳಾಸ e-mail Info@petaindia.org. ಈ ಮೂಲಕ ಮಾಹಿತಿ ನೀಡುವಂತೆ ಕೋರಿದ್ದಾರೆ.

ಇದಾಗಲೇ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ಟ್ವಿಟರ್​ನಲ್ಲಿ ಒಬ್ಬರು ಕಮೆಂಟ್​ ಮಾಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net