

ಬೆಂಗಳೂರು: ವಾಸಕ್ಕಾಗಿ ಹೊಸ ಅಪಾರ್ಟ್ಮೆಂಟ್ವೊಂದನ್ನು ನೋಡಲು ಹೋದ ವ್ಯಕ್ತಿಯೊಬ್ಬರು ಅಲ್ಲಿಂದಲೇ ಕೆಳಕ್ಕೆ ಹಾರಿ ಇಹಲೋಕವನ್ನೇ ತ್ಯಜಿಸಿದ ದುರಂತ ಪ್ರಕರಣವೊಂದು ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ವಿವೇಕ್ ಮಧುಸೂದನ್ ವೈದ್ಯ ಎಂಬವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ವರದಿಯಾಗಿದೆ. ವಿವೇಕ್ ಕೆಲವು ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಛೇದಿತರಾಗಿದ್ದರು. ಆ ನಂತರ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇವರು ಇಂದು ಜಿ ಕಾರ್ಪ್ ಎಂಬ ಅಪಾರ್ಟ್ಮೆಂಟ್ ನೋಡಲು ಹೋಗಿದ್ದಾಗ ಈ ಆತ್ಯಹತ್ಯೆ ನಡೆದಿದೆ.
ಅಪಾರ್ಟ್ಮೆಂಟ್ ನೋಡಲು ಹೋಗಿದ್ದ ಇವರು ನಿರ್ಮಾಣ ಹಂತದಲ್ಲಿದ್ದ ಕಟ್ಟಡದ 15ನೇ ಮಹಡಿಯಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿದ್ದ ರಭಸಕ್ಕೆ ತಲೆಯೊಡೆದು ಹೋಗಿದ್ದು ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕೆ ವಿವೇಕನಗರ ಪೊಲೀಸರು ಧಾವಿಸಿದ್ದು, ಹೆಚ್ಚಿನ ವಿವರ ಇನ್ನಷ್ಟೇ ಬಹಿರಂಗವಾಗಬೇಕಿದೆ.