ತ್ಯಾಜ್ಯ ವಿಲೇವಾರಿಗೆ ಶಾಶ್ವತ ವ್ಯವಸ್ಥೆ : ಶಾಸಕಿ ಭಾಗೀರಥಿ ಮುರುಳ್ಯ ಸೂಚನೆ

Bhagirathi Murulya
Published on

ಸುಳ್ಯ: ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸೂಕ್ತವಾದ ಪರ್ಯಾಯ ಸ್ಥಳ ಹುಡುಕಿ ಸುಳ್ಯ ನಗರದ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಸೂಚಿಸಿದ್ದಾರೆ.

ಕಲ್ಚರ್ಪೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ವಿಲೇವಾರಿ ಸಮಸ್ಯೆ ಹಾಗೂ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ನಪಂ ಸಭಾಂಗಣದಲ್ಲಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಹಸೀಲ್ದಾರ್ ಜಿ.ಮಂಜುನಾಥ್ ಮಾತನಾಡಿ, ನಗರದ ತ್ಯಾಜ್ಯ ವಿಲೇವಾರಿಗೆ ಪರ್ಯಾಯ ಸ್ಥಳ ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಭೆಗೆ ತಿಳಿಸಿದರು.

ಕಲ್ಚರ್ಪೆ ಪರಿಸರ ಉಳಿಸಿ ಹೋರಾಟ ಸಮಿತಿ ಪ್ರಮುಖರಾದ ಅಶೋಕ್ ಪೀಚೆ ಮಾತನಾಡಿ, ಕಲ್ಚರ್ಪೆಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಿದ ಆರಂಭದಿಂದಲೂ ಪರಿಸರಕ್ಕೆ, ಸ್ಥಳೀಯರಿಗೆ ತೀವ್ರ ಸಮಸ್ಯೆ ಆಗಿದೆ. ಆದುದರಿಂದ ಅಲ್ಲಿಂದ ಘಟಕ ಸ್ಥಳಾಂತರ ಆಗಬೇಕು ಎಂದರು.

ನಪಂ ಮಾಜಿ ಉಪಾಧ್ಯಕ್ಷ ಕೆ.ಗೋಕುಲ್‌ದಾಸ್ ಮಾತನಾಡಿ, ತ್ಯಾಜ್ಯ ವಿಲೇವಾರಿ ಘಟಕದಿಂದ ಈ ಪ್ರದೇಶದ ಜನರಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ ಎಂದರು. ನಪಂ ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ, ಅಲ್ಲಿ ತುಂಬಿರುವ ಕಸ ತೆರವು ಆಗಬೇಕಾಗಿದೆ ಹಾಗೂ ಶಾಶ್ವತ ಸ್ಥಳ ಗುರುತಿಸುವ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಕರೆಯಬೇಕು ಎಂದರು.

ನಪಂ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್.ಮಾತನಾಡಿ, ಗ್ಯಾಸಿಫಿಕೇಶನ್ ಮೂಲಕ ಕಸ ಬರ್ನ್ ಮಾಡುವ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗಿದೆ. ಯಂತ್ರ ಚಾಲನೆಯಲ್ಲಿ ಇದೆ ಎಂದರು.

ಬಳಿಕ ಪ್ರತ್ಯೇಕ ಜಾಗ ಗುರುತಿಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net