ಸಿನಿಮಾ

ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಜನ ತಿರಸ್ಕರಿಸುವರು

ಬಾಗಲಕೋಟೆ: ಗ್ಯಾರಂಟಿ ಕಾರ್ಡ್ ಸೇರಿದಂತೆ ವಿವಿಧ ಭರವಸೆಗಳನ್ನು ನೀಡಿದ್ದ ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶದಲ್ಲಿ ತಿರಸ್ಕರಿಸಿದ್ದರು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅದೇ ಪುನರಾವರ್ತನೆ ಆಗಲಿದೆ. ರಾಜ್ಯದ ಜನ ಬಿಜೆಪಿಯ ಮೇಲೆ ಭರವಸೆ ಇಟ್ಟಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು. ೧೦೩ ಭರವಸೆಗಳು ಅದರಲ್ಲೂ ೧೬ ಪ್ರಮುಖಾಂಶಗಳ ಪ್ರಣಾಳಿಕೆಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಜನರಿಗೆ ಬಿಜೆಪಿ ಮೇಲೆ ಹೆಚ್ಚಿನ ವಿಶ್ವಾಸವಿದೆ. ಅದಕ್ಕಾಗಿ ಜನ ನಮ್ಮನ್ನು ಬೆಂಬಲಿಸಲಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿರುವಂತೆ ಉತ್ತರ ಪ್ರದೇಶದಲ್ಲೂ ಗ್ಯಾರಂಟಿ ಕಾರ್ಡ್ಗಳನ್ನು ಪ್ರಿಯಾಂಕ ಗಾಂಧಿ ವಿತರಿಸಿದ್ದರು. ಆದರೆ ಜನಕ್ಕೆ ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಲ್ಲ. ಅಲ್ಲಿ ಕೇವಲ ಎರಡು ಸ್ಥಾನ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಯಿತು ಎಂದು ಹೇಳಿದರು.

ಬಿಪಿಎಲ್ ಕುಟುಂಬದ ಮನೆಗಳಿಗೆ ಪ್ರತಿದಿನ ಅರ್ಧ ಲೀಟರ್ ಹಾಲು, ವರ್ಷಕ್ಕೆ ಮೂರು ಸಿಲಿಂಡರ್ ಉಚಿತ, ಗ್ರಾಮೀಣ ಭಾಗದಲ್ಲಿ ಸೂರಿ ಇಲ್ಲದವರಿಗೆ ೧೦ ಲಕ್ಷ ರೂ.ನಿವೇಶನ ನೀಡುವುದು, ನಗರಭಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಿ ಸೂರಿಲ್ಲದವರಿಗೆ ಮನೆ ವಿತರಿಸುವುದು, ಸಮಾನ ನಾಗರಿಕ ಕಾಯ್ದೆ ಜಾರಿಗೊಳಿಸುವುದು ಸೇರಿದಂತೆ ಬಿಜೆಪಿ ಪ್ರಣಾಳಿಕೆ ಘೋಷಿಸಿದೆ. ನಾವು ಹೇಳಿದನ್ನು ಮಾಡಿ ತೋರಿಸುತ್ತೇವೆ. ಹೀಗಾಗಿ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಪ್ರಧಾನಿ ಮೋದಿ ಅವರ ರ‍್ಯಾಲಿಗಳು ಆರಂಭಗೊಂಡ ನಂತರ ಬಿಜೆಪಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಮೇ ೭ ರಂದು ಬಾದಾಮಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಮೋದಿ ಆಗಮಿಸಲಿದ್ದಾರೆ. ಜಿಲ್ಲೆಯ ೭ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಸಚಿವ ಗೋವಿಂದ ಕಾರಜೋಳ ಅವರು ಮಾತನಾಡಿ, ಜನರ ಅಗತ್ಯತೆ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಬಿಜೆಪಿ ಪ್ರಜಾಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ. ಮುಂದಿನ ಐದು ವರ್ಷದಲ್ಲಿ ರಾಜ್ಯದ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಲಾಗಿದ್ದು, ಕಳೆದ ಅವಽಯಲ್ಲಿ ನಾವು ೩.೬೭ ಲಕ್ಷ ಕೋಟಿ ರೂ.ಗಳನ್ನು ನೀರಾವರಿಗಾಗಿ ವ್ಯಯಮಾಡಿದ್ದೇವೆ. ಭೂಸ್ವಾಧೀನಗೊಳ್ಳುವ ಭೂಮಿಯ ಬೆಲೆಯನ್ನು ರೈತರ ನಿರೀಕ್ಷೆಯಂತೆ ಘೋಷಿಸಿದ್ದೇವೆ. ಆದರೆ ಕೃಷ್ಣೆಗೆ ಪ್ರತಿ ವರ್ಷ ೧೦ ಸಾವಿರ ಕೋಟಿ ರೂ.ಗಳನ್ನು ವ್ಯಯ ಮಾಡುವುದಾಗಿ ಘೋಷಿಸಿದ ಕಾಂಗ್ರೆಸ್ಸಿನವರು ಖರ್ಚು ಮಾಡಿದ್ದು ಕೇವಲ ೨೬೬೭ ಕೋಟಿ ರೂ.ಗಳನ್ನ ಎಂದು ವಾಗ್ದಾಳಿ ನಡೆಸಿದರು.

ಸಚಿವ ಮುರುಗೇಶ ನಿರಾಣಿ, ಸಂಸದ ಪಿ.ಸಿ.ಗದ್ದಿಗೌಡರ, ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷೆ ವನಿತಾ ಶ್ರೀನಿವಾಸ, ಹಾಲಿ ಶಾಸಕರು, ಬಿಜೆಪಿ ಅಭ್ಯರ್ಥಿಗಳಾದ ಡಾ.ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಸಿದ್ದು ಸವದಿ,ಶಾಂತಗೌಡ ಪಾಟೀಲ, ಜಗದೀಶ ಗುಡಗುಂಟಿ, ನಾರಾಯಣಸಾ ಭಾಂಡಗೆ, ಬಿಜೆಪಿ ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್