

ಮೈಸೂರು: ವರುಣ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಜತೆಗೂಡಿ ಮತಯಾಚನೆಗೆ ತೆರಳಿದ್ದಾಗ ಲಲಿತಾದ್ರಿಪುರದಲ್ಲಿ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾಗ ನೀವು ಏನು ಅಭಿವೃದ್ಧಿ ಮಾಡಿದ್ದೀರಿ? ಆವಾಗ ಏನು ಕೊಡುಗೆ ನೀಡಿದ್ದೀರಿ ಎಂದು ಈಗ ಮತ ಕೇಳಲು ಬಂದಿದ್ದೀರಿ? ಎಂದು ವಿ.ಸೋಮಣ್ಣ ಅವರನ್ನು ಪ್ರಶ್ನಿಸುತ್ತಾ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣ ಕ್ಷೇತ್ರದಲ್ಲಿ ಬಿಜೆಪಿಯಿಂದ ವಿ.ಸೋಮಣ್ಣ ಕಣಕ್ಕಿಳಿಯುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿದ್ದರು. ಗ್ರಾಮಸ್ಥರು ಬಹಿರಂಗ ಪ್ರಶ್ನೆಗೆ ಉತ್ತರಿಸುವಾಗ ವಿ.ಸೋಮಣ್ಣ ಹಾಗೂ ಪ್ರತಾಪ್ ಸಿಂಹ ತಬ್ಬಿಬ್ಬಾದ ಸನ್ನಿವೇಶವೂ ನಡೆದಿದೆ.
ಸೋಮಣ್ಣಗೆ ಪ್ರಚಾರದ ವೇಳೆ ಮತದಾರರು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯವನ್ನು ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಪ್ರತಾಪ್ ಸಿಂಹ ಹಾಗೂ ಸೋಮಣ್ಣ ತಡೆದಿದ್ದು, ಮೊಬೈಲ್ ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.