

ಬೆಂಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ಗೆ ಬಂದಿರುವ ಜಗದೀಶ್ ಶೆಟ್ಟರ್ ಅವರನ್ನು ನಾನು ಸ್ವಾಗತ ಮಾಡುತ್ತೇನೆ. ಅವರೊಬ್ಬ ಅನುಭವಿ ಹಾಗೂ ಹಿರಿಯ ರಾಜಕಾರಣಿ. ಶೆಟ್ಟರ್ ಆಗಮನದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಗೆ ಸಹಾಯವಾಗುತ್ತದೆ ಎಂದು ಮಾಜಿ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಆರ್ಎಸ್ಎಸ್ನಿಂದ ಬಂದವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪುತ್ತಾರಾ ಎಂಬ ಪ್ರಶ್ನೆಗೆ ಜಿ.ಪರಮೇಶ್ವರ್ ಉತ್ತರಿಸುತ್ತಾ, ನಮ್ಮ ಪಕ್ಷಕ್ಕೆ ಬಂದವರು ಕನ್ವರ್ಟ್ ಆಗುತ್ತಾರೆ. ಸಮಾಜದಲ್ಲಿ ಸಮಾನತೆ ಕೊಡುವುದು ನಮ್ಮ ನಿಲುವು. ಇದನ್ನು ಜಗದೀಶ್ ಶೆಟ್ಟರ್ ಸಹಿತ ಪ್ರತಿಯೊಬ್ಬರೂ ಒಪ್ಪುತ್ತಾರೆ. ಉದಾಹರಣೆಗೆ ಸಿದ್ದರಾಮಯ್ಯ ಸಿದ್ಧಾಂತ ಒಪ್ಪಿ ಬಂದರು. ಬಳಿಕ ಸಿಎಂ, ವಿಪಕ್ಷ ನಾಯಕ ಆದರು ಎಂದು ಉತ್ತರಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಪ್ರಮುಖ ಸಭೆಯಲ್ಲಿ ಭಾಗವಾಹಿಸಿದ ನಂತರ ಪರಮೇಶ್ವರ್ ಪ್ರತಿಕ್ರಿಯಿಸಿ, ಪ್ರಣಾಳಿಕೆ ತಯಾರಾಗಿದ್ದು, ಅಂತಿಮ ಹಂತದ ಚರ್ಚೆಯಲ್ಲಿದೆ. ಚರ್ಚೆ ಮುಗಿದ ತಕ್ಷಣ ಬಿಡುಗಡೆ ಆಗುತ್ತದೆ. ಕಾಂಗ್ರೆಸ್ನ ಕೊನೆಯ ಪಟ್ಟಿ ಬಿಡುಗಡೆ ವಿಚಾರವಾಗಿ ಖರ್ಗೆ ಅವರು ಅಂತಿಮಗೊಳಿಸುತ್ತಿದ್ದು, ಕೂಡಲೇ ಬಿಡುಗಡೆ ಮಾಡುತ್ತಾರೆ ಎಂದರು.