

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಈ ಹಿಂದೆ ದಟ್ಟ ಕಾಡು ಪ್ರದೇಶದಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಇದೀಗ ಗ್ರಾಮೀಣ ಭಾಗದಲ್ಲಿ ಮಾತ್ರವಲ್ಲದೆ ಹೆದ್ದಾರಿ ಬದಿಯಲ್ಲೂ ಕಾಣಿಸಿಕೊಳ್ಳುತ್ತಿರುವುದು ವಾಹನ ಸವಾರರ ಸಹಿತ ಗ್ರಾಮದ ಜನತೆ ಭಯಭೀತರಾಗಿದ್ದಾರೆ.
ಕಾರ್ಕಳ ತಾಲೂಕಿನ ಗ್ರಾಮಗಳಲ್ಲಿ ಚಿರತೆ ಸದ್ದು ಕೇಳಿಬರುತ್ತಿದ್ದು ಜನ ಓಡಾಡಲು ಭಯಪಡುವ ವಾತಾವರಣವಿದೆ. ಈ ಹಿಂದೆ ಕತ್ತಲಾಗುತ್ತಿದಂತೆ ಕಾಣಿಸಿಕೊಳ್ಳುತ್ತಿದ್ದ ಚಿರತೆಗಳು ಇದೀಗ ಹಗಲು ಹೊತ್ತಿನಲ್ಲೇ ಕಾಣಿಸಿಕೊಳ್ಳುವುದರಿಂದ ಜನ ಆತಂಕಕ್ಕೊಳಗಾಗಿದ್ದಾರೆ.
ಸಾಕಷ್ಟು ಚಿರತೆಗಳ ಸೆರೆ: ಗ್ರಾಮೀಣ ಭಾಗದಲ್ಲಿ ಹಗಲು ರಾತ್ರಿಯೆನ್ನದೆ ಚಿರತೆಗಳು ರಾಜಾರೋಷವಾಗಿ ಓಡಾಡುತ್ತಿದ್ದು ಹೈನುಗಾರರ ಸಹಿತ ಗ್ರಾಮಸ್ಥರು ಭಯಪಡುವಂತಾಗಿದೆ. ದಿನೇದಿನೆ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ಸಮಸ್ಯೆಯಿಂದ ಮುಕ್ತಿ ಕರುಣಿಸಿ ಎಂದು ಜನ ಅರಣ್ಯಾಧಿಕಾರಿಗಳ ಮೊರೆ ಹೋಗುವುದು ಸಾಮಾನ್ಯ. ಇತ್ತೀಚೆಗೆ ಕಲ್ಯಾ ಗ್ರಾಮದಲ್ಲಿ ಕಾಣಿಸಿಕೊಂಡ ಚಿರತೆ ಸಣ್ಣ ಮರಿಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಸೆರೆಹಿಡಿದ್ದಾರೆ. ಅಲ್ಲದೆ ಬೆಳ್ಮಣ್ ಗ್ರಾಮದ ಅರ್ಕಳ ಎಂಬಲ್ಲಿ ಕೋಳಿಯನ್ನು ಹಿಡಿಯಲು ಬಾವಿ ದಂಡೆಗೆ ಹಾರಿದ ಚಿರತೆಯೊಂದು ಆಯತಪ್ಪಿ ಬಾವಿಯೊಳಗೆ ಬಿದ್ದು ನಂತರ ಅರಣ್ಯಾಧಿಕಾರಿಗಳು ಸೆರೆ ಹಿಡಿದು ಸುರಕ್ಷಿತವಾಗಿ ಕಾಡು ಪ್ರದೇಶಕ್ಕೆ ಬಿಟ್ಟಿದ್ದಾರೆ. ಹೀಗೆ ತಾಲೂಕಿನ ನಾನಾ ಭಾಗದಲ್ಲಿ ಚಿರತೆಗಳ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದ್ದು ಈಗಾಗಲೇ ಸಾಕಷ್ಟು ಚಿರತೆಯನ್ನು ಸೆರೆ ಹಿಡಿದಿದ್ದರೂ ಚಿರತೆ ಸಮಸ್ಯೆ ಮಾತ್ರ ಕಡಿಮೆಯಾಗಿಲ್ಲ.
ನಿದ್ದೆ ಬಿಟ್ಟು ಕಾಯುವ ಸ್ಥಿತಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಕತ್ತಲಾಗುತ್ತಿದ್ದಂತೆ ಮನೆಯಂಗಳಕ್ಕೆ ಲಗ್ಗೆಯಿಡುವ ಚಿರತೆಗಳು ಈಗಾಗಲೇ ಹಲವಾರು ಜಾನುವಾರು, ಸಾಕುಪ್ರಾಣಿ ನಾಯಿಯನ್ನು ಹೊತ್ತೊಯ್ದಿದ್ದು, ಬಹುತೇಕ ಮನೆಯ ಸಾಕು ಪ್ರಾಣಿಗಳು ನಿತ್ಯ ಕಾಣೆಯಾಗುತ್ತಿದೆ. ಕೆಲವೊಂದು ಭಾಗದಲ್ಲಿ ಕಾಡುದಾರಿಯಲ್ಲಿ ಜನ ಓಡಾಡುವ ಸಂದರ್ಭ ಮರದಲ್ಲಿ ಹಾಗೂ ನೆರಳಿನ ಜಾಗದಲ್ಲಿ ಚಿರತೆಗಳು ಮಲಗಿರುವುದು ಕಂಡುಬರುತ್ತಿವೆ. ತೀರ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನರು ಕೃಷಿಕರಾಗಿದ್ದು ಜಾನುವಾರು ಹಾಗೂ ಸಾಕು ಪ್ರಾಣಿಗಳಿದ್ದು ನಿದ್ದೆ ಬಿಟ್ಟು ಕಾಯುವ ಪರಿಸ್ಥಿತಿ ಇದೆ.
ಕಳೆದ ಐದಾರು ವರ್ಷಕ್ಕೆ ಹೋಲಿಕೆ ಮಾಡಿದರೆ ಇತ್ತೀಚಿನ ಕೆಲ ದಿನಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಸಣ್ಣ ಸಣ್ಣ ಪೊದೆಗಳಿಂದ ಕೂಡಿದ ಪರಿಸರವಿದ್ದರೂ ಚಿರತೆಗಳು ವಾಸಿಸುತ್ತವೆ. ಕೆಲವೊಂದು ಭಾಗದಲ್ಲಿ ನಾಯಿಯನ್ನು ಕೊಂದು ತಿಂದ ಚಿರತೆಗಳು ಮತ್ತೆ ಅದೇ ಭಾಗದಲ್ಲಿ ಬೀಡು ಬಿಡುತ್ತಿವೆ. ಇಡೀ ತಾಲೂಕಿನಲ್ಲಿ ಬಹುತೇಕ ಗ್ರಾಮದಲ್ಲಿ ಚಿರತೆ ಸಂಖ್ಯೆ ಹೆಚ್ಚಾದ ಬಗ್ಗೆ ಅನುಮಾನಗಳಿವೆ.
ದಿನಕ್ಕೊಂದು ಪ್ರದೇಶದಲ್ಲಿ ಅರಣ್ಯ ಇಲಾಖೆ ಈಗಾಗಲೇ ಬೋನು ಇಟ್ಟರೂ ಚಿರತೆ ಪತ್ತೆಯಿಲ್ಲ. ಅರಣ್ಯಾಧಿಕಾರಿಗಳೂ ಬೋನುಗಳನ್ನು ಅಲ್ಲಿಂದಿಲ್ಲಿಗೆ ಸಾಗಿಸುತ್ತ ಸುಸ್ತಾಗಿದ್ದಾರೆ. ಚಿರತೆ ಕಾಣಿಸಿಕೊಂಡ ಜಾಗದಲ್ಲಿ ಬೋನು ತಂದಿಟ್ಟು ವಾರ ಕಳೆಯುತ್ತಿದ್ದರೂ ಚಿರತೆ ಮಾತ್ರ ಕಣ್ಣಿಗೆ ಬೀಳುತ್ತಿಲ್ಲ. ಹೀಗಾಗಿ ಅರಣ್ಯಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಆದರೂ ಜನರಿಂದ ಮಾಹಿತಿ ಬಂದ ಕಡೆಗಳಿಗೆ ಅರಣ್ಯಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಿದ್ದಾರೆ. ಕಾರ್ಕಳದ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಸೂಡ, ನಂದಳಿಕೆ, ನಿಟ್ಟೆ, ಕೌಡೂರು, ಕಲ್ಯಾ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿರತೆ ಪತ್ತೆಯಾಗುತ್ತಿದ್ದು ಈಗಾಗಲೇ ಕೆಲವೊಂದು ಚಿರತೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದೆ.
ಚಿರತೆ ಹಿಡಿಯುವ ಬಗ್ಗೆ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ಹಲವು ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ. ಒಟ್ಟು 8 ಕಡೆಗಳಲ್ಲಿ ಬೋನು ಅಳವಡಿಸಲಾಗಿದೆ. ಪ್ರಭಾಕರ್ ಕುಲಾಲ್ ವಲಯ ಅರಣ್ಯಾಧಿಕಾರಿ ಕಾರ್ಕಳ.