ಫೆಂಗಲ್‌ಗೆ ರೈತ ಕಂಗಾಲು

krushi
Published on

ವಿಜಯವಾಣಿ ಸುದ್ದಿಜಾಲ ಕೋಟ

ಪದೇಪದೆ ಹವಾಮಾನದ ವೈಪರಿತ್ಯದಿಂದಾಗಿ ಕೋಟ ಹೋಬಳಿ ಪ್ರದೇಶ ಸಹಿತ ಸುತ್ತಮುತ್ತಲ ಪ್ರದೇಶಗಳಲ್ಲಿ ಎರಡನೇ ಬೆಳೆ ಮರೀಚಿಕೆಯಾಗಿದೆ. ಇದರಿಂದ ರೈತರ ಜೀವನ ಅಧೋಗತಿಗೆ ಸಾಗುವ ಭೀತಿ ಎದುರಾಗಿದೆ.

ಮಣ್ಣಿನ ತೇವಾಂಶದ ಮೇಲೆ ಅವಲಂಬಿತವಾಗಿ ರೈತ ವಿವಿಧ ಬೆಳೆಗಳ ಬೀಜ ಬಿತ್ತುತ್ತಿದ್ದು, ಈ ಪೈಕಿ ಶೇಂಗಾ ಬೆಳೆಯೇ ಹೆಚ್ಚು. ಈಗಾಗಲೇ ಅನೇಕ ರೈತರು ಶೇಂಗಾ ಬೀಜ ಬಿತ್ತನೆಮಾಡಿದ್ದು, ಅಕಾಲಿಕ ಮಳೆಯಿಂದ ಬಿತ್ತಿದ ಬೀಜ ನೀರಿನಲ್ಲಿ ಕೊಚ್ಚಿಹೋಗಿದ್ದು ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಕೋಟ ಹೋಬಳಿಯೊಂದರಲ್ಲಿ 1975 ಹೆಕ್ಟೇರ್ ಕೃಷಿ ಭೂಪ್ರದೇಶ ಎರಡನೇ ಬೆಳೆಗೆ ಸಿದ್ಧಗೊಂಡಿದ್ದು, ಇದರಲ್ಲಿ ಶೇ.40ರಷ್ಟು ಬೆಳೆಗಳು ಚಂಡಮಾರುತದ ಪ್ರಭಾವಕ್ಕೆ ನೆಲಕಚ್ಚಿವೆ.

ರೈತನಿಗೆ ಉಂಟಾದ ಹಾನಿಯ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಒಂದೆಡೆ ರೈತನ ಸಾಲ ಏರುತ್ತಲೇ ಹೋದರೆ ಮತ್ತೊಂದೆಡೆ ಆತನ ಬೆಳೆಗೆ ಬೆಂಬಲ ಬೆಲೆ ದೊರೆಯುತ್ತಿಲ್ಲ. ಸರ್ಕಾರದ ನಡೆ ಕುರಿತು ರೈತ ವಲಯದಿಂದ ಆಕ್ರೋಶ ವ್ಯಕ್ತವಾಗುತ್ತಿವೆ.

ಬೆಳೆ ಹಾನಿಯುಂಟಾದ ಪ್ರದೇಶಗಳು

ಪ್ರಸ್ತುತ ಭತ್ತದ ಕಟಾವಿನ ನಂತರ ಕೋಟ, ಕೋಟತಟ್ಟು, ತೆಕ್ಕಟ್ಟೆ, ಸಾಲಿಗ್ರಾಮ ಸಹಿತ ವಿವಿಧ ಭಾಗಗಳಲ್ಲಿ ಈಗಾಗಲೇ ಉದ್ದು, ಶೇಂಗಾ ಬೀಜ ಸಹಿತ ವಿವಿಧ ಧಾನ್ಯಗಳ ಬಿತ್ತನೆ ಕಾರ್ಯಗಳು ನಡೆದಿದೆ. ಆದರೆ ಅವುಗಳು ಫೆಂಗಲ್ ಚಂಡಮಾರುತದ ಹೊಡೆತಕ್ಕೆ ಸಂಪೂರ್ಣ ನಾಶವಾಗಿವೆ. ಇದು ರೈತನನ್ನು ಚಿಂತೆಗೀಡುಮಾಡಿದೆ.

ಕೃಷಿಯನ್ನೆ ಅವಲಂಬಿತನಾದ ರೈತಸಮುದಾಯ ಬೆಳೆ ಸಾಲ ಮಾಡುತ್ತಾನೆ. ಈ ರೀತಿ ವಾತಾವರಣದ ವೈಪರೀತ್ಯಕ್ಕೆ ಒಳಗಾದರೆ ಕೃಷಿ ಸಾಲಗಳ ಗತಿ ಏನು? ರೈತಸಮುದಾಯದ ಆರ್ಥಿಕ ಸ್ಥಿತಿ ಚಿಂತಾಜನಕ ವ್ಯವಸ್ಥೆಗೆ ತಳ್ಳಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆ, ಸರ್ಕಾರ ರೈತ ಸಮುದಾಯದ ನೆರವಿಗೆ ಧಾವಿಸಬೇಕಿದೆ. -ಮಣೂರು ಭಾಸ್ಕರ ಶೆಟ್ಟಿ ಕೃಷಿಕ ವಾತಾವರಣ ವೈಪರೀತ್ಯಕ್ಕೆ ಕೋಟ ಹೋಬಳಿ ಭಾಗದ 1975 ಹೆಕ್ಟೇರ್ ಕೃಷಿ ಭೂಮಿ ಪೈಕಿ 15ರಿಂದ 20 ಎಕರೆ ಕೃಷಿ ಭೂ ಪ್ರದೇಶದ ಧಾನ್ಯಗಳು ಹಾನಿಗೊಂಡ ಬಗ್ಗೆ ಮಾಹಿತಿ ಲಭಿಸಿದೆ. ಕೆಲವು ಭಾಗಗಳಿಗೆ ಭೇಟಿ ನೀಡಲಾಗಿದೆ. ಅಲ್ಲದೆ ಈವರೆಗೆ ಹಾನಿಗೊಂಡ ಬಗ್ಗೆ ರೈತರಿಂದ ಅರ್ಜಿ ಬಂದಿಲ್ಲ. ಸಂಬಂಧಿಸಿದ ಪಂಚಾಯಿತಿ, ಕಂದಾಯ ಇಲಾಖೆಯಿಂದ ಮಾಹಿತಿ ಕೇಳಲಾಗಿದೆ. ಅರ್ಜಿ ಬಂದ ಕೂಡಲೇ ಮೇಲಧಿಕಾರಿಗಳಿಗೆ ರವಾನಿಸಲಾಗುವುದು. 100 ಕ್ವಿಂಟಾಲ್ ಶೇಂಗಾ ದಾಸ್ತಾನು ಇರಿಸಲಾಗಿದ್ದು, 250 ಕ್ವಿಂಟಾಲ್ ಇಂಡೆಂಟ್ ನೀಡಲಾಗಿದೆ -ಸುಪ್ರಭಾ, ಕೋಟ ರೈತ ಸಂಪರ್ಕ ಕೇಂದ್ರದ ಅಧಿಕಾರಿ https://www.vijayavani.net/taluk-guarantee-schemes-implementation-committee-first-meeting https://www.vijayavani.net/m-g-m-national-conference-in-college

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net