

Birth Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಅಂದಹಾಗೆ ಒಬ್ಬ ವ್ಯಕ್ತಿಯ ಗುಣ, ನಡತೆ, ವರ್ತನೆ ಹಾಗೂ ಆತನ ಆಗು ಹೋಗುಗಳ ಹಿಂದೆ ಜನ್ಮ ನಕ್ಷತ್ರಗಳು ಕಾರಣವಾಗಿರುತ್ತದೆ. ಜನ್ಮ ನಕ್ಷತ್ರದ ಪ್ರಕಾರವಾಗಿ ಜೀವನದಲ್ಲಿ ಏನು ನಡೆಯಬೇಕೋ ಅದು ನಡದೇ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ.
ನಿಮ್ಮ ಜನ್ಮ ನಕ್ಷತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಈ ಜನ್ಮ ನಕ್ಷತ್ರಗಳು ಪ್ರಭಾವ ಒಂದೇ ರೀತಿ ಇರುವುದಿಲ್ಲ. ಗ್ರಹಗಳ ಚಲನೆಯಿಂದಾಗಿ ಅವುಗಳ ಪ್ರಭಾವವೂ ಕೂಡ ಬದಲಾಗುತ್ತಿರುತ್ತದೆ. ಒಂದು ಸಮಯದಲ್ಲಿ ನೋವು ಅನುಭವಿಸಿದ್ದರೆ, ಇನ್ನೊಂದು ಸಮಯದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಅಂದಹಾಗೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ನಕ್ಷತ್ರಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ಕರುಣಾಮಯಿಗಳಾಗಿರುತ್ತಾರಂತೆ. ಹಾಗಾದರೆ, ತಮಗೆ ನೋವಾದರೂ ಪರವಾಗಿಲ್ಲ ಇನ್ನೊಬ್ಬರ ಸಂತೋಷ ಮುಖ್ಯ ಎಂದು ಭಾವಿಸುವಂತಹ ಉದಾತ್ತ ಗುಣಗಳನ್ನು ಹೊಂದಿರುವವರು ಯಾವ ನಕ್ಷತ್ರಗಳಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿಯೋಣ.
ರೇವತಿ ನಕ್ಷತ್ರದಲ್ಲಿ ಜನಿಸಿದ ಜನರು ಇತರರಿಗೆ ಸಹಾಯ ಮಾಡುವುದರಲ್ಲಿ ಹೆಸರುವಾಸಿಯಾಗಿರುತ್ತಾರೆ. ತಾವೇ ಬಿಕ್ಕಟ್ಟಿನಲ್ಲಿದ್ದರೂ ಇತರರಿಗೆ ಸಹಾಯ ಮಾಡುವ ತಮ್ಮ ಸ್ವಭಾವವನ್ನು ಎಂದಿಗೂ ಬದಲಾಯಿಸುವುದಿಲ್ಲ. ಹೇಗಾದರೂ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವ ದೃಢನಿಶ್ಚಯ ಹೊಂದಿರುತ್ತಾರೆ. ಅವರ ಮಾತುಗಳು ಯಾವಾಗಲೂ ಸತ್ಯ ಮತ್ತು ಪ್ರಾಮಾಣಿಕತೆಯಿಂದ ತುಂಬಿರುತ್ತವೆ. ಅವರು ತುಂಬಾ ತಾಳ್ಮೆ ಮತ್ತು ಶಾಂತ ಸ್ವಭಾವದವರು.
ಉತ್ತರ ಆಷಾಡ ನಕ್ಷತ್ರದಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ಇತರರ ಭಾವನೆಗಳು ಮತ್ತು ಆಸೆಗಳಿಗೆ ಆದ್ಯತೆ ನೀಡುವ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಅವರು ಏನನ್ನೂ ಹೇಳದೆಯೇ ಇತರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಖಂಡಿತವಾಗಿಯೂ ತಮ್ಮಿಂದ ಸಾಧ್ಯವಾದ ಸಹಾಯವನ್ನು ಮಾಡುತ್ತಾರೆ. ಅವರ ಮಾತು ಯಾವಾಗಲೂ ತುಂಬಾ ಮೃದು ಮತ್ತು ಸಭ್ಯವಾಗಿರುತ್ತದೆ. ಅವರು ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ, ಬಡವರಿಗೆ ಸಹಾಯ ಮಾಡುವ ಮತ್ತು ಅವರನ್ನು ಗೌರವಿಸುವ ಗುಣವನ್ನು ಹೊಂದಿರುತ್ತಾರೆ.
ಉತ್ತರಾಧಿ ನಕ್ಷತ್ರದಲ್ಲಿ ಜನಿಸಿದ ಜನರು ಬಹಳ ಬುದ್ಧಿವಂತರು ಮತ್ತು ಕರುಣೆಯ ಸಾಕಾರರು. ಅವರು ಇತರರ ಸಂತೋಷಕ್ಕಾಗಿ ತಮ್ಮನ್ನು ತಾವು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಅವರಲ್ಲಿ ಅಪಾರ ಕರುಣೆ ಇರುತ್ತದೆ. ಇತರರು ಸಹಾಯ ಕೇಳಿದರೆ, ಅದನ್ನು ಹೇಗಾದರೂ ಒದಗಿಸಲು ಹೋರಾಡುತ್ತಾರೆ. ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಅಪಾರ ಆನಂದವನ್ನು ಕಂಡುಕೊಳ್ಳುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.