

ಬೆಂಗಳೂರು: ರಿಷಭ್ ಶೆಟ್ಟಿ ನಿರ್ಮಾಣದ 'ಕಥಾ ಸಂಗಮ' ಚಿತ್ರದ ನಂತರ ಕನ್ನಡದಲ್ಲಿ ಎರಡ್ಮೂರು ಆಂಥಾಲಜಿ (ಸಣ್ಣ ಚಿತ್ರಗಳ ಗುಚ್ಛ) ಚಿತ್ರಗಳು ಘೋಷಣೆಯಾದವು. ಈ ಪೈಕಿ ಗುರು ದೇಶಪಾಂಡೆ ನಿರ್ಮಾಣದ 'ಪೆಂಟಗನ್' ಚಿತ್ರ ಸಹ ಒಂದು. ಈಗ ಈ ಚಿತ್ರವು ಏಪ್ರಿಲ್ 07ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಐದು ಕಥೆಗಳನ್ನು ಒಳಗೊಂಡ, ಐವರು ನಿರ್ದೇಶಕರು ನಿರ್ದೇಶನ ಮಾಡಿರುವ 'ಪೆಂಟಗನ್' ಚಿತ್ರದ ಹಾಡುಗಳು ಮತ್ತು ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ನಿರೀಕ್ಷೆ ಹೆಚ್ಚಾಗಿದೆ. ಆಕಾಶ್ ಶ್ರೀವತ್ಸ (ಶಿವಾಜಿ ಸುರತ್ಕಲ್), ಚಂದ್ರಮೋಹನ್ (ಬ್ರಹ್ಮಚಾರಿ), ರಾಘು ಶಿವಮೊಗ್ಗ (ಚೂರಿಕಟ್ಟೆ), ಕಿರಣ್ ಕುಮಾರ್ ಹಾಗೂ ಗುರು ದೇಶಪಾಂಡೆ ತಲಾ ಒಂದೊಂದು ಕಥೆಯನ್ನು ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗಷ್ಟೇ, ಈ ಚಿತ್ರದ 'ಕಾಮನಬಿಲ್ಲು ಮೂಡುತಿದೆ ' ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಜಂಕಾರ್ ಮ್ಯೂಸಿಕ್ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂತೋಷ ವೆಂಕಿ ಮತ್ತು ಇಂಚರ ರಾವ್ ಅವರ ಕಂಠದಲ್ಲಿ ಈ ಹಾಡು ಮೂಡಿ ಬಂದಿದೆ. ಈ ಕಥೆಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ನಡೆಯುವ ಮೋಸ, ಅಪರಾಧ ಜಗತ್ತು, ಯುವ ಪೀಳಿಗೆಯ ಭವಿಷ್ಯದ ಕುರಿತು ಬೆಳಕು ಚೆಲ್ಲಲಾಗಿದೆ.
'ಪೆಂಟಗನ್'ನ ಐದು ಚಿತ್ರಗಳಲ್ಲಿ ರವಿಶಂಕರ್, ಪ್ರಕಾಶ್ ಬೆಳವಾಡಿ, ಕಿಶೋರ್, ಪ್ರಮೋದ್ ಶೆಟ್ಟಿ, ಬಿರಾದಾರ್ ಮುಂತಾದ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ.
ಈ ಚಿತ್ರಕ್ಕೆ ಅಭಿಲಾಷ್ ಕಲ್ಲತ್ತಿ, ಗುರುಪ್ರಸಾದ್ ಎಮ್.ಜಿ, ಕಿರಣ್ ಹಂಪಾಪುರ ಅವರ ಛಾಯಾಗ್ರಹಣವಿದ್ದು, ಮಣಿಕಾಂತ್ ಕದ್ರಿ ಅವರ ಸಂಗೀತವಿದೆ. ಜಿ ಸಿನಿಮಾಸ್ ಸಂಸ್ಥೆಯಡಿ ಈ ಚಿತ್ರವನ್ನು ಗುರು ದೇಶಪಾಂಡೆ ನಿರ್ಮಿಸಿದ್ದಾರೆ.