23 ಲಕ್ಷ ಜನರ ಪಿಂಚಣಿ ರದ್ದು; ಅನರ್ಹ ಫಲಾನುಭವಿಗಳನ್ನು ಗುರುತಿಸಿದ ರಾಜ್ಯ ಸರ್ಕಾರ

ವಿಜಯವಾಣಿ (6)
Published on

ಬೆಂಗಳೂರು: ಸಾಮಾಜಿಕ ಭದ್ರತೆ ಯೋಜನೆಯಡಿ ಅಸಹಾಯಕ, ಅಶಕ್ತ, ವೃದ್ಧರು, ಅಂಗವಿಕಲರು ಮತ್ತು ವಿಧವೆಯರಿಗೆ ನೀಡುವ ಮಾಸಿಕ ಪಿಂಚಣಿ ಪಡೆಯುತ್ತಿರುವವರ ಪೈಕಿ 23.19 ಲಕ್ಷ ಅನರ್ಹರನ್ನು ಗುರುತಿಸಿರುವ ರಾಜ್ಯ ಸರ್ಕಾರ ಕೂಡಲೇ ಅವರನ್ನು ಅರ್ಹರ ಪಟ್ಟಿಯಿಂದ ಹೊರಹಾಕಿ ಬೊಕ್ಕಸ ಸೋರಿಕೆ ತಪ್ಪಿಸಲು ಮುಂದಾಗಿದೆ.

ಮುಖ್ಯಾಂಶಗಳು

  • 21.87 ಲಕ್ಷ ವೃದ್ಧಾಪ್ಯ ಫಲಾನುಭವಿಗಳ ಪೈಕಿ 9.04 ಲಕ್ಷ ಅನರ್ಹ
  • 31.33 ಲಕ್ಷ ಸಂಧ್ಯಾ ಸುರಕ್ಷಾ ಕಾರ್ಡ್ ಪೈಕಿ 14.15 ಲಕ್ಷ ರದ್ದು
  • ಕುಟುಂಬ ದತ್ತಾಂಶ ದಿಂದ ಅನರ್ಹ ಫಲಾನುಭವಿಗಳು ಪತ್ತೆ

ರಾಜ್ಯದಲ್ಲಿ 65 ವರ್ಷ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳನ್ನು ಅರ್ಥಿಕ ಸಂಕಷ್ಟದಿಂದ ಪಾರು ಮಾಡುವ ದಿಶೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಇದೇ ರೀತಿಯಾಗಿ 60 ವರ್ಷ ಅಥವಾ ಮೇಲ್ಪಟ್ಟ ಹಿರಿಯರಿಗೆ ವೃದ್ಧಾಪ್ಯ ವೇತನ ಯೋಜನೆಯಡಿ 800 ರೂ. ಮಾಸಾಶನ ನೀಡಲಾಗುತ್ತಿದೆ.

ಪ್ರಸ್ತುತ ರಾಜ್ಯದಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ 21.87 ಲಕ್ಷ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳಿಗೆ ಪಿಂಚಣಿ ಪಡೆಯುತ್ತಿದ್ದಾರೆ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದೆ. ಆದರೆ, ಅಧಿಕೃತ ದತ್ತಾಂಶಕ್ಕಿಂತ ಅಧಿಕ ಜನರು ಮಾಸಾಶನ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯ ಸರ್ಕಾರ ಫಲಾನುಭವಿಗಳ ವಿವರಗಳನ್ನು ಕುಟುಂಬ ದತ್ತಾಂಶದ ಮಾಹಿತಿಯೊಂದಿಗೆ ಹೋಲಿಕೆ ಮಾಡಿದೆ.

ನಿಗದಿಗಿಂತ ಕಡಿಮೆ ವಯಸ್ಸಿನವರು, ಶ್ರೀಮಂತರು, ಎಪಿಎಲ್ ಕಾರ್ಡ್, ಆದಾಯ ತೆರಿಗೆ ಪಾವತಿದಾರರು, ಅರೆ-ಸರ್ಕಾರಿ ನಿವೃತ್ತ ನೌಕರರ (ಎಚ್​ಆರ್​ಎಂಎಸ್) ದತ್ತಾಂಶಗೊಂದಿಗೆ ಸಂಯೋಜನೆ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ಅನರ್ಹರು ಪತ್ತೆಯಾಗಿದ್ದಾರೆ. ವೃದ್ಧಾಪ್ಯ ವೇತನ ಯೋಜನೆ ಅಂದಾಜು 9.04 ಲಕ್ಷ, ಸಂಧ್ಯಾ ಸುರಕ್ಷಾ ಅಡಿ 14.15 ಲಕ್ಷ ಅನರ್ಹರು ಬೆಳಕಿಗೆ ಬಂದಿದ್ದಾರೆ.

ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಕಾರ್ಡ್​ಗಳನ್ನು ರದ್ದು ಮಾಡಲು ಕಂದಾಯ ಇಲಾಖೆ ಆದೇಶಿಸಿದೆ. ಬಡವರ ಪಿಂಚಣಿ ಹಣದಲ್ಲೂ ಉಳಿತಾಯಕ್ಕೂ ಮುಂದಾಗಿರುವ ಸರ್ಕಾರ ದಿವಾಳಿ ಅಂಚಿಗೆ ತಲುಪಿದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? | ಸುನಿಲ್ ಕುಮಾರ್ ಕಾರ್ಕಳ ಶಾಸಕ

ಸರ್ಕಾರಕ್ಕೆ ಲಾಭವೇನು?

1. ಬೊಕ್ಕಸಕ್ಕೆ ದೊಡ್ಡ ಪ್ರಮಾಣದ ಉಳಿತಾಯ

2. ಅರ್ಹರಿಗೆ ಯೋಜನೆ ಲಾಭ ಸಿಗುವ ತೃಪ್ತಿ

3. ಯೋಜನೆ ದುರು ಪಯೋಗಕ್ಕೆ ಕಡಿವಾಣ

4. ನೈಜ ಹೊಸ ಫಲಾನು ಭವಿಗಳಿಗೆ ಅನುಕೂಲ

5. ಆಡಳಿತ ಯಂತ್ರದ ಮೇಲೆ ಹೊರೆ ಕಡಿಮೆ

9 ಸಾವಿರ ಕೋಟಿ ರೂಪಾಯಿ ವೆಚ್ಚ

ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಕೇಂದ್ರದ ಪಾಲು ಅತ್ಯಲ್ಪ. ಅಂದರೆ ಒಂದು ಸಾವಿರ ಕೋಟಿ ರೂ.ಗಿಂತ ಕಡಿಮೆ ವೆಚ್ಚ ಮಾಡುತ್ತಿದೆ. ಆದರೆ ರಾಜ್ಯ ಸರ್ಕಾರ 9 ಸಾವಿರ ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡುತ್ತಿದೆ. ಇದೀಗ ಅನರ್ಹರನ್ನು ಪಟ್ಟಿಯಿಂದ ಹೊರಗಿಟ್ಟರೆ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹೊರೆ ಕಡಿಮೆಯಾಗಲಿದೆ.

ಅನರ್ಹರನ್ನು ಕಂಡು ಹಿಡಿದಿದ್ದು ಹೇಗೆ?

  • ಎಚ್​ಆರ್​ಎಂಎಸ್ ಮೂಲಕ ಅನರ್ಹ ಪಿಂಚಣಿದಾರರು ಪತ್ತೆ
  • ಆದಾಯ ತೆರಿಗೆ ಪಾವತಿಸುವವರ ಮಾಹಿತಿ ಮೂಲಕವೂ ಬೆಳಕಿಗೆ
  • ಆಧಾರ್ ಕಾರ್ಡ್​ನ ದತ್ತಾಂಶ ಆಧರಿಸಿ ವಯೋಮಾನದಲ್ಲಿ ಸ್ಪಷ್ಟತೆ
  • ಕುಟುಂಬ ತಂತ್ರಾಂಶದಲ್ಲಿನ ದತ್ತಾಂಶದ ವಿಶ್ಲೇಷಣೆಯಲ್ಲೂ ಮಾಹಿತಿ

ಅನರ್ಹ ಪಡಿತರದಾರರು 44 ಲಕ್ಷ

ರಾಜ್ಯದಲ್ಲಿ 44 ಲಕ್ಷ ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂದು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೆಗೆ ನಿರ್ಧರಿಸಿದೆ. 2011ರ ಜನಸಂಖ್ಯೆ ದತ್ತಾಂಶದ ಪ್ರಕಾರ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಲಾಗಿದೆ. ಆದರೆ, 44 ಲಕ್ಷ ಹೆಚ್ಚುವರಿ ಕಾರ್ಡ್ ಇರುವುದಾಗಿ ಹೇಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net