ಅನಧಿಕೃತ ಡಂಪಿಂಗ್ ಯಾರ್ಡ್‌ಗೆ ದಂಡಾಸ್ತ್ರ

New Project (8)
Published on

ಉಳ್ಳಾಲ: ಕಿಡಿಗೇಡಿಗಳ ದುಷ್ಕೃತ್ಯದಿಂದ ತ್ಯಾಜ್ಯ ರಾಶಿಬಿದ್ದು ದುರ್ವಾಸನೆಯಿಂದಾಗಿ ಸಾಂಕ್ರಾಮಿಕ ಕಾಯಿಲೆ ಭೀತಿಗೆ ಕಾರಣವಾಗಿದ್ದ ಬಬ್ಬುಕಟ್ಟೆ-ರಾಣಿಪುರ ಸಂಪರ್ಕ ರಸ್ತೆಯಲ್ಲಿ ಉಳ್ಳಾಲ ನಗರಸಭೆಯಿಂದ ದಂಡಾಸ್ತ್ರ ಎಚ್ಚರಿಕೆ ಫಲಕ ಅಳವಡಿಸಲಾಗಿದೆ.

ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿರುವ ಬಬ್ಬುಕಟ್ಟೆಯಿಂದ ರಾಣಿಪುರ ಸಂಪರ್ಕ ರಸ್ತೆ ನಡುವೆ ಸಿಗುವ ಚಂದಪ್ಪ ಎಸ್ಟೇಟ್, ಸೇವಂತಿಗುಡ್ಡೆ, ತಾರಿಪಡ್ಪು, ಮುಡಿಮೋಡಿ ಪ್ರದೇಶದಲ್ಲಿ ರಾತ್ರಿ ಹೊತ್ತು ಮಾತ್ರವಲ್ಲದೆ ಹಗಲಲ್ಲೂ ಕಿಡಿಗೇಡಿಗಳು ಡಂಪಿಂಗ್ ಯಾರ್ಡ್ ಮಾದರಿಯಲ್ಲಿ ತ್ಯಾಜ್ಯ ತಂದು ಸುರಿದು ಹೋಗುತ್ತಿದ್ದಾರೆ.

ಸತ್ತ ಪ್ರಾಣಿಗಳನ್ನೂ ಇಲ್ಲೇ ಎಸೆಯಲಾಗುತ್ತಿದೆ. ಕೋಳಿ, ಮಾಂಸದಂಗಡಿಗಳ ಅಂಗಡಿಗಳ ತ್ಯಾಜ್ಯ, ಮನೆ, ಹೋಟೆಲ್, ವಸತಿ ಗೃಹಗಳ ತ್ಯಾಜ್ಯ ವಾಹನಗಳಲ್ಲಿ ತಂದು ಇಲ್ಲಿ ಸುರಿಯಲಾಗುತ್ತಿದೆ. ಇವೆಲ್ಲವೂ ಕೊಳೆತು ದುರ್ನಾತ ಬೀರುತ್ತಿದ್ದು ಈ ಪರಿಸರ ಅನಧಿಕೃತ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ. ಪರಿಸರದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವಂತೆ ಸ್ಥಳೀಯರು ಹಲವು ಬಾರಿ ನಗರಸಭೆಗೆ ಮನವಿ ಮಾಡಿದ್ದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ‘ವಿಜಯವಾಣಿ’ಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡ ನಗರಸಭೆ ಅಧಿಕಾರಿಗಳು ದಂಡ ವಿಧಿಸುವ ಬಗ್ಗೆ ಮೂರು ಎಚ್ಚರಿಕೆ ಬ್ಯಾನರ್ ಅಳವಡಿಸಿದ್ದಾರೆ.

ವಿಜಯವಾಣಿ ವರದಿಗೆ ಶ್ಲಾಘನೆ

‘ವಿಜಯವಾಣಿ’ ವರದಿ ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದೆ. ಆದರೆ ನಗರಸಭೆ ಅಧಿಕಾರಿಗಳು ಬ್ಯಾನರ್ ಅಳವಡಿಸಿದ್ದಾರೆ ಎಂದು ಸ್ಥಳೀಯ ನಿವಾಸಿಯೂ, ನಗರಸಭಾ ಸದಸ್ಯರೂ ಆಗಿರುವ ದಿನಕರ್ ಉಳ್ಳಾಲ್ ಪತ್ರಿಕೆಯ ವರದಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net