ಪಟ್ಲ ಸತೀಶ್ ಶೆಟ್ಟಿ ಅವರಿಂದ ಯಕ್ಷಗಾನದ ಕಂಪು ವಿಶ್ವದಾದ್ಯಂತ ಹರಡಿದೆ ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವದ ಸಮಾಲೋಚನಾ ಸಭೆಯಲ್ಲಿ ಡಾ.ಕೆ.ಪ್ರಕಾಶ್ ಶೆಟ್ಟಿ

mng--26 Dec Patla meeting
Published on

ಮಂಗಳೂರು: ಕರಾವಳಿಗೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನದ ಕಂಪನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ ಕೀರ್ತಿ ಪಟ್ಲ ಸತೀಶ್ ಶೆಟ್ಟಿಯವರದ್ದಾಗಿದೆ. ಯಕ್ಷಗಾನ ಕಲಾವಿದರಿಗೆ ಸದಾ ಬೆಂಬಲ ನೀಡುತ್ತಿರುವ ಪಟ್ಲರ ಕಾರ್ಯಕ್ರಮಕ್ಕೆ ನಾವೆಲ್ಲರೂ ಸಹಾಯ ಸಹಕಾರ ನೀಡಬೇಕು ಎಂದು ಎಂ.ಆರ್.ಜಿ. ಗ್ರೂಫ್ ಚೇರ್ ಮೆನ್ ಡಾ.ಕೆ.ಪ್ರಕಾಶ್ ಶೆಟ್ಟಿ ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ದಶಮಾನೋತ್ಸವದ ಕುರಿತು ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಜೂನ್ 1ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮ ಅವಿಸ್ಮರಣೀಯವಾಗಿಸಲು ನಾವೆಲ್ಲರೂ ಒಗ್ಗೂಡಿ ದುಡಿಯಬೇಕು ಎಂದರು.

ಟ್ರಸ್ಟ್ ನ ಮಹಾದಾನಿ, ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲೆಗೆ ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾನಮಾನವನ್ನು ನೀಡಿದೆ. ನಮ್ಮೆಲ್ಲರನ್ನು ಒಗ್ಗೂಡಿಸಿಕೊಂಡು ಭಾಗವತ ಪಟ್ಲರು ಪ್ರತೀವರ್ಷ ಕಲಾವಿದರ ನೆರವಿಗಾಗಿ ಕಾರ್ಯಕ್ರಮ ಆಯೋಜನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಈ ಬಾರಿಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತ್ಯೇಕ ಕಮಿಟಿ ರಚಿಸಿಕೊಂಡು ಕೆಲಸ ಮಾಡಬೇಕು ಎಂದರು.

ಟ್ರಸ್ಟ್ ಪ್ರಧಾನ ಸಂಚಾಲಕ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪ್ರಸ್ತಾವನೆಗೈದರು.

ಟ್ರಸ್ಟ್ ನ ಪ್ರಧಾನ ಸಂಚಾಲಕ ಶಶಿಧರ್ ಶೆಟ್ಟಿ ಬರೋಡ, ಉದ್ಯಮಿ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಬಿಲ್ಲಾಡಿ ಅಶೋಕ್ ಶೆಟ್ಟಿ, ಪೂನಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಂಬೈ ಹೋಟೆಲ್ ಉದ್ಯಮಿ ಕರ್ನಿರೆ ವಿಶ್ವನಾಥ್ ಶೆಟ್ಟಿ, ಸೀತಾರಾಮ್ ರೈ ಸವಣೂರು, ಪಟ್ಲ ಫೌಂಡೇಶನ್ ಟ್ರಸ್ಟ್ ನ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ವಂದಿಸಿದರು.

31ರಂದು 929 ಮಕ್ಕಳಿಂದ ರಂಗಪ್ರವೇಶ

ದಾನಿಗಳು ನೀಡಿರುವ ಸಹಕಾರದಿಂದ ನಮ್ಮ ಟ್ರಸ್ಟ್ ಯಶಸ್ವಿಯಾಗಿ ನಡೆಯುತ್ತಿದೆ. ಪಟ್ಲ ಟ್ರಸ್ಟ್ ನ ಯಕ್ಷ ಶಿಕ್ಷಣ ಅಭಿಯಾನದಡಿಯಲ್ಲಿ 6 ಜಿಲ್ಲೆಗಳ ಮಕ್ಕಳಿಗೆ ಕಳೆದ 4 ವರ್ಷಗಳಲ್ಲಿ ಸುಮಾರು 9000 ಮಕ್ಕಳಿಗೆ ಯಕ್ಷ ಶಿಕ್ಷಣ ನೀಡುತ್ತಿದೆ. ಇದೇ ತಿಂಗಳ 31ರಂದು 21 ಶಾಲೆಗಳ ಒಟ್ಟು 929 ಮಕ್ಕಳು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಒಡ್ಡೂರು ಫಾರ್ಮ್ ನಲ್ಲಿ ಯಕ್ಷಗಾನ ರಂಗಪ್ರವೇಶ ಮಾಡಲಿದ್ದಾರೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net