ಕಾಸರಗೋಡು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಲಾಗಿದೆ. ಕುಂಬಳೆ ಗ್ರಾಮ ಪಂಚಾಯಿತಿಯ ನಾಂಗಿ ಮತ್ತು ಕೊಪ್ಪಳ ಕರಾವಳಿಯ ಹೋಂಸ್ಟೇಯೊಂದರಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅದರ ಮಾಲೀಕರಿಗೆ 10 ಸಾವಿರ ರೂ.ದಂಡ ವಿಧಿಸಲಾಗಿದೆ.
ಕರಾವಳಿಯಲ್ಲಿರುವ ವ್ಯಾಪಾರಿ ಸಂಸ್ಥೆ ವಠಾರವನ್ನು ಶುಚಿಯಾಗಿರಿಸಿಕೊಳ್ಳದೆ ಇರುವುದಕ್ಕಾಗಿ ಅಂಗಡಿ ಮಾಲೀಕರಿಗೆ 2 ಸಾವಿರ ರೂ. ದಂಡ ವಿಧಿಸಲಾಯಿತು. ಮದುವೆ ಮತ್ತು ಇತರ ಕಾರ್ಯಕ್ರಮಗಳಿಂದ ಸಂಗ್ರಹಿಸಿದ ತ್ಯಾಜ್ಯವನ್ನು ಸ್ವಂತ ಜಮೀನಿನಲ್ಲಿ ಅವೈಜ್ಞಾನಿಕವಾಗಿ ಸಂಸ್ಕರಿಸಿದ್ದಕ್ಕಾಗಿ ಖಾಸಗಿ ವ್ಯಕ್ತಿಗೆ 2,500 ರೂ. ದಂಡ ವಿಧಿಸಲಾಯಿತು. ಆ ಪ್ರದೇಶದಲ್ಲಿರುವ ರೆಸಾರ್ಟ್ಗಳಲ್ಲಿ ಹಾಗೂ ಇತರ ಸಂಸ್ಥೆಗಳಲ್ಲಿ ತಪಾಸಣೆ ನಡೆಸಲಾಯಿತು. ಕಾಸರಗೋಡು ಕಾರ್ನಿವಲ್ ನಡೆದ ಸ್ಥಳದಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನ ಮತ್ತು ತ್ಯಾಜ್ಯ ರಾಶಿ ಹಾಕಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಕರಿಗೆ ನಗರಸಭೆ ಮೂಲಕ 10 ಸಾವಿರ ರೂ.ದಂಡ ವಿಧಿಸಲಾಗಿದೆ.