ಅಲಂಕಾರಿಕ ಗಿಡಗಳ ತೆರವಿಗೆ ಪಿಡಿಒ ನಿರ್ದೇಶನ : ಅಧಿಕಾರಿ ವಿರುದ್ಧ ತಾರತಮ್ಯ ನೀತಿ ಅನುಸರಣೆ ಆರೋಪ

New Project (18)
Published on

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಅಪಾಯಕಾರಿ ಮರಗಿಡಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಸೂಚಿಸಿದರೆ, ಉಪ್ಪಿನಂಗಡಿ ಪಿಡಿಒ ಅಲಂಕಾರಿಕ ಗಿಡಗಳನ್ನು ತೆರವುಗೊಳಿಸಲು ನಿರ್ದೇಶಿಸಿ ಅತಿರೇಕ ವರ್ತನೆ ತೋರುತ್ತಿದ್ದಾರೆ ಎಂದು ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತ ಮಹೇಂದ್ರ ವರ್ಮ ಆಪಾದಿಸಿದ್ದಾರೆ.

ಉಪ್ಪಿನಂಗಡಿ ಗ್ರಾಮದ ಉದ್ದಗಲಕ್ಕೂ ರಸ್ತೆಯನ್ನು ಆಕ್ರಮಿಸಿಕೊಂಡಿರುವ ಸ್ಥಿತಿಯಲ್ಲಿದ್ದ ಗಿಡಮರಗಳನ್ನು ಕೆಲ ದಿನಗಳಿಂದ ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ಕೈಗೊಂಡಿರುವ ಉಪ್ಪಿನಂಗಡಿ ಪಿಡಿಒ ಕಾರ್ಯವೈಖರಿ ಬಗ್ಗೆ ಶ್ಲಾಘನೆಯ ನುಡಿಗಳು ವ್ಯಕ್ತವಾಗಿದ್ದ ನಡುವೆ ಇದೀಗ ಕಾರ್ಯಾಚರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ನನ್ನ ಅಂಗಡಿಯ ಜಗಲಿಯಲ್ಲಿ ಅಲಂಕಾರಿಕ ಗಿಡಗಳನ್ನು ಚಟ್ಟಿಯಲ್ಲಿರಿಸಿರುವುದನ್ನು ತೆರವುಗೊಳಿಸಲು ನಿರ್ದೇಶಿಸಿರುವ ಪಿಡಿಒಗೆ ಅದೇ ಕಟ್ಟಡದಲ್ಲಿ ಜಗಲಿಯನ್ನಾಕ್ರಮಿಸಿ ಗಾಜಿನ ಆವರಣ ನಿರ್ಮಿಸಿರುವುದು ಅಪರಾಧವೆನಿಸಲಿಲ್ಲ. ಪೇಟೆಯ ಅಲಂಕಾರಕ್ಕೂ ಪೂರಕವಾಗಿದ್ದ ಆಲಂಕಾರಿಕ ಗಿಡಗಳನ್ನು ತೆರವುಗೊಳೀಸಲು ಸೂಚಿಸಿರುವ ಉದ್ದೇಶವೇನು? ರಸ್ತೆಯನ್ನೇ ಆಕ್ರಮಿಸಿ ಕಟ್ಟಡ ನಿರ್ಮಾಣ, ಆವರಣಗೋಡೆ ನಿರ್ಮಿಸಿದ್ದರೂ ಮೌನವಾಗಿರುವ ಪಂಚಾಯಿತಿ ಆಡಳಿತ ಅಲಂಕಾರಿಕ ಗಿಡಗಳ ಬಗ್ಗೆ ಕ್ರಮ ಕೈಗೊಳ್ಳಲು ಕಾರಣವೇನು? ಅಲಂಕಾರಿಕ ಗಿಡವನ್ನು ಮತ್ತೆ ಅದೇ ಸ್ಥಳದಲ್ಲಿರಿಸಿದ್ದು, ಸವಾಲಾಗಿ ಸ್ವೀಕರಿಸಲಾಗುವುದು ಎಂದು ಮಹೇಂದ್ರ ವರ್ಮ ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಜಿಲ್ಲಾಡಳಿತದ ನಿರ್ದೇಶನದನ್ವಯ ಗ್ರಾಮ ವ್ಯಾಪ್ತಿಯಲ್ಲಿನ ಎಲ್ಲ ಅಪಾಯಕಾರಿ ಮರಗಳನ್ನು, ರಸ್ತೆಯಂಚಿಗೆ ಆವರಿಸಿ ಬೆಳೆದಿರುವ ಗಿಡಮರಗಳನ್ನು ತೆರವುಗೊಳಿಸಲು ಗ್ರಾಮಸ್ಥರಿಗೆ ಪೂರ್ವ ಸೂಚನೆ ನೀಡಲಾಗಿತ್ತು. ನಿಗದಿತ ಗಡುವು ಮೀರಿದ ಬಳಿದ ಪಂಚಾಯಿತಿ ಕಾರ್ಯಾಚರಣೆಗಿಳಿದಿರುವುದಾಗಿದೆ. ರಸ್ತೆಯಂಚು ಹಾಗೂ ರಸ್ತೆಯನ್ನೇ ಆಕ್ರಮಿಸಿ ಶಾಶ್ವತ ಸ್ವರೂಪದ ರಚನೆಗಳನ್ನು ಮಾಡಿರುವುದು ಗಮನಕ್ಕೆ ಬಂದಿದ್ದು, ಅವೆಲ್ಲವನ್ನೂ ತೆರವುಗೊಳಿಸಲು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗುವುದು. ವಾಹನ ಪಾರ್ಕಿಂಗ್‌ಗೆ ಸ್ಥಳಾವಕಾಶ ಲಭಿಸಲಿ ಎಂಬ ಕಾರಣಕ್ಕೆ ಆಲಂಕಾರಿಕ ಗಿಡಗಳನ್ನು ಹಿಂದಕ್ಕೆ ಇರಿಸಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net