

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಬಂಟ್ವಾಳ ತಾಲೂಕಿನ ತುಂಬೆ ಹಾಗೂ ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮೀಣ ಪ್ರದೇಶಗಳನ್ನು ಬೆಸೆಯುವ ನೇತ್ರಾವತಿ ನದಿಗೆ ಅಡ್ಡಲಾಗಿ 60 ಕೋಟಿ ರೂ. ವೆಚ್ಚದಲ್ಲಿ 340 ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಗ್ರೀನ್ ಸಿಗ್ನಲ್ ದೊರಕಿದೆ. ವಿಸ್ತೃತ ಯೋಜನಾ ವರದಿ(ಡಿಪಿಆರ್) ಕ್ಲೀಯರ್ ಆದ ತಕ್ಷಣ ತಾಂತ್ರಿಕ ಅನುಮೋದನೆ ಲಭಿಸಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಸೇತುವೆ ನಿರ್ಮಾಣಗೊಳ್ಳಲಿರುವ ಪ್ರದೇಶದ ನದಿಯ ಎರಡು ಬದಿ ಕೂಡ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು, ಸ್ಥಳೀಯ ಶಾಸಕ, ಪ್ರಸ್ತುತ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಹಿಂದೆ ಸಚಿವರಾಗಿದ್ದ ವೇಳೆಯೇ ತುಂಬೆ- ಸಜೀಪ ಮಧ್ಯೆ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್ಡಿಸಿಎಲ್)ದ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಹಲವು ಕಾರಣಕ್ಕೆ ಅದು ವಿಳಂಬವಾಗಿದ್ದು, ಕಳೆದ ಡಿಸೆಂಬರ್ನಲ್ಲಿ ಸೇತುವೆಗೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿತ್ತು.
ಇದೀಗ ಲೋಕೋಪಯೋಗಿ ಇಲಾಖೆ ಮೂಲಕ 60 ಕೋಟಿ ರೂ. ಅನುದಾನ ಮಂಜೂರಾಗಿ ನಬಾರ್ಡ್ ಆರ್ಐಡಿಎಫ್ 31ನಡಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಸಿಆರ್ಜಡ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲಾಖೆ ಈಗಾಗಲೇ ಸ್ಥಳೀಯ ಮಣ್ಣು ಪರೀಕ್ಷೆ ಪೂರ್ಣಗೊಳಿಸಿದ್ದು, ಜುಲೈ 3ರಂದು ಬೆಂಗಳೂರಿನಲ್ಲಿ ನಡೆದ ಸಮಿತಿ ಸಭೆಯಲ್ಲಿ ಮಂಜೂರಾತಿ ಲಭಿಸಿದೆ.
ಒಟ್ಟು 340 ಮೀ. ಉದ್ದಕ್ಕೆ ಸೇತುವೆ ನಿರ್ಮಾಣವಾಗಲಿದ್ದು, 12 ಮೀ. ಅಗಲ ಹೊಂದಿರುತ್ತದೆ. ಮಧ್ಯೆ 8 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. ಸೇತುವೆಯಲ್ಲಿ ಒಟ್ಟು 9 ಅಂಕಣಗಳಿದ್ದು, 8 ಅಂಕಣಗಳು 30 ಮೀ. ಅಂತರದಲ್ಲಿದ್ದು, 1 ಅಂಕಣ 70 ಮೀ. ಅಂತರಕ್ಕೆ ಬೌಸ್ಟಿಂಗ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ. 6 ಮೀ. ಎತ್ತರಕ್ಕೆ ಸ್ಲಾಬ್ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ಪ್ರದೇಶಗಳಿಗೆ ಸಂಪರ್ಕ
ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಗಳು, ಒಂದಷ್ಟು ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಸೇತುವೆ ತುಂಬೆ ಜಂಕ್ಷನ್ ಮತ್ತು ಸಜೀಪ ಜಂಕ್ಷನ್ ಮೂಲಕ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ಮುಡಿಪು- ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲಿದೆ. ತುಂಬೆ, ಪುದು- ಫರಂಗಿಪೇಟೆ, ಮೇರಮಜಲು, ಕಳ್ಳಿಗೆ, ಅಮ್ಮುಂಜೆ ಮೊದಲಾದ ಗ್ರಾಮೀಣ ಭಾಗ ಸೇರಿ ಬಂಟ್ವಾಳ, ಬಿ.ಸಿ.ರೋಡು ಸುತ್ತಮುತ್ತಲ ಭಾಗದ ಜನ ಸಜೀಪ, ಮುಡಿಪು, ದೇರಳಕಟ್ಟೆ ಭಾಗ ಸಂಪರ್ಕಿಸಲು ಅನುಕೂಲವಾಗಲಿದೆ.
ನಾಡದೋಣಿಗೆ ಬ್ರೇಕ್
ಮಂಗಳೂರು ವಿಶ್ವವಿದ್ಯಾಲಯ, ದೇರಳಕಟ್ಟೆಯ ವಿವಿಧ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಕೇರಳ ಸಂಪರ್ಕಿಸುವ ದೃಷ್ಟಿಯಿಂದ ಬಹಳ ಅನುಕೂಲವಾಗುವ ಸೇತುವೆ ಎನಿಸಿಕೊಳ್ಳಲಿದೆ. ಪ್ರಸ್ತುತ ತುಂಬೆ ಭಾಗದ ಮಂದಿ ಸಜೀಪ ಪ್ರದೇಶವನ್ನು ಸಂಪರ್ಕಿಸಬೇಕಾದರೆ ಸುತ್ತು ಬಳಸಿ ಸಾಗಬೇಕಾದ ಅನಿವಾರ್ಯತೆ ಇತ್ತು. ಪ್ರಸ್ತುತ ತುಂಬೆ- ಸಜೀಪ ಮಧ್ಯೆ ನಾಡದೋಣಿ ಸಂಪರ್ಕವಿದ್ದು, ಆದರೆ ಅದರ ಬಳಕೆ ತೀರಾ ಕಡಿಮೆಯಾಗಿದೆ. ಸೇತುವೆ ನಿರ್ಮಾಣದ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲಿ ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿದ್ದು, ಡಿಪಿಆರ್ ಕ್ಲೀಯರ್ ಆದ ಬಳಿಕ ತಾಂತ್ರಿಕ ಅನುಮೋದನೆ ಸಿಕ್ಕಿ ಮುಂದೆ ಟೆಂಡರ್ ಪ್ರಕ್ರಿಯೆಗಳು ಆರಂಭಗೊಳ್ಳುತ್ತವೆ. ಜತೆಗೆ ಸಿಆರ್ಜಡ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಜೈಪ್ರಕಾಶ್ ಸಿ., ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಬಂಟ್ವಾಳ https://www.vijayavani.net/bearing-capacity-test-of-steel-bridge-at-panemangalore https://www.vijayavani.net/guarantee-implementation-committee-progress-review-meeting