

ನವದೆಹಲಿ: ಪೇಟಿಎಂ ಬ್ರಾಂಡ್‌ನ ಮಾಲೀಕತ್ವ ಹೊಂದಿರುವ ಫಿನ್‌ಟೆಕ್ ಸಂಸ್ಥೆ ಒನ್97 ಕಮ್ಯುನಿಕೇಷನ್ಸ್ ಕಂಪನಿಯು ಸಾಕಷ್ಟು ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಆದರೆ, ಎಷ್ಟು ನೌಕರರನ್ನು ವಜಾ ಮಾಡಲಾಗುತ್ತಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.
ಕಂಪನಿಯ ಪೇಟಿಎಂ ಪುನರ್ರಚನೆಯ ಭಾಗವಾಗಿ ಹಾಗೂ ಸುಗಮ ಪರಿವರ್ತನೆಗಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 2024 ತ್ರೈಮಾಸಿಕದಲ್ಲಿ ಪೇಟಿಎಂನ ಮಾರಾಟ ಉದ್ಯೋಗಿಗಳ ಸಂಖ್ಯೆಯು ತ್ರೈಮಾಸಿಕ ಆಧಾರದ ಅಂದಾಜು 3,500 ರಷ್ಟು ಇಳಿದಿದೆ, ಮುಖ್ಯವಾಗಿ ಪೇಟಿಎಂ ಪಾವತಿಗಳ ಬ್ಯಾಂಕ್‌ನ ಸೇವೆಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧದ ಪ್ರಭಾವದಿಂದಾಗಿ ಹೀಗಾಗಿದೆ.
"ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್ ಕಂಪನಿಯ ಪುನರ್ರಚನೆಯ ಪ್ರಯತ್ನಗಳ ಭಾಗವಾಗಿ ರಾಜೀನಾಮೆ ನೀಡಿದ ಉದ್ಯೋಗಿಗಳಿಗೆ ಔಟ್‌ಪ್ಲೇಸ್‌ಮೆಂಟ್ ಬೆಂಬಲವನ್ನು (ಅಂದರೆ, ಬೇರೆಡೆ ಉದ್ಯೋಗ ಪಡೆದುಕೊಳ್ಳಲು ನೆರವು) ಒದಗಿಸುತ್ತಿದೆ.
"ಕಂಪನಿಯ ಮಾನವ ಸಂಪನ್ಮೂಲ ತಂಡಗಳು ಪ್ರಸ್ತುತ ನೇಮಕ ಮಾಡಿಕೊಳ್ಳುತ್ತಿರುವ 30ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಸಕ್ರಿಯವಾಗಿ ಸಹಕರಿಸುತ್ತಿವೆ. ತಮ್ಮ ಮಾಹಿತಿ ಹಂಚಿಕೊಳ್ಳಲು ಆಯ್ಕೆ ಮಾಡಿಕೊಂಡಿರುವ ಉದ್ಯೋಗಿಗಳಿಗೆ ಸಹಾಯ ಒದಗಿಸುತ್ತಿವೆ. ಅವರ ತಕ್ಷಣದ ಸ್ಥಳಾವಕಾಶವನ್ನು ಸುಲಭಗೊಳಿಸುತ್ತವೆ" ಎಂದು ಕಂಪನಿ ಸೋಮವಾರ ತಿಳಿಸಿದೆ.
ಆದರೆ, ಕಂಪನಿಯ ಈ ಪುನರ್ರಚನೆಯಿಂದ ಪ್ರಭಾವಿತರಾದ ಉದ್ಯೋಗಿಗಳ ಸಂಖ್ಯೆಯನ್ನು ಪೇಟಿಎಂ ಬಹಿರಂಗಪಡಿಸಿಲ್ಲ. "ಪೇಟಿಎಂ ಸಹ ಉದ್ಯೋಗಿಗಳಿಗೆ ನೀಡಬೇಕಾದ ಬೋನಸ್‌ಗಳನ್ನು ವಿತರಿಸುತ್ತಿದೆ, ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುತ್ತದೆ" ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪೇಟಿಎಂನ ಸಹವರ್ತಿಯಾದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್, ಗ್ರಾಹಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಯಾವುದೇ ಗ್ರಾಹಕರ ಖಾತೆಗಳು, ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ಸ್ವೀಕರಿಸದಂತೆ ಮಾರ್ಚ್ 15 ರಿಂದ ನಿರ್ಬಂಧಿಸಿದೆ.
ಪೇಟಿಎಂ ತನ್ನ ಪಾವತಿ ಬ್ಯಾಂಕ್‌ಗೆ ಸಂಬಂಧಿಸಿದ ವಹಿವಾಟುಗಳ ಮೇಲೆ ಆರ್ಬಿಐ ವಿಧಿಸಿದ ನಿಷೇಧದ ನಂತರ 2024 ರ ಜನವರಿ-ಮಾರ್ಚ್‌ನಲ್ಲಿ 550 ಕೋಟಿ ರೂಪಾಯಿಗಳಿಗೆ ನಷ್ಟವನ್ನು ವಿಸ್ತರಿಸಿದೆ ಎಂದು ವರದಿಯಾಗಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪನಿಯು 167.5 ಕೋಟಿ ರೂಪಾಯಿ ನಷ್ಟ ದಾಖಲಿಸಿತ್ತು.