ಓದುವ ಛಲ, ಪೋಷಕರಿಗೆ ಹೆಗಲಾಗುವ ತುಡಿತ! ವಿಮಾನ ದುರಂತದಲ್ಲಿ ಕಮರಿ ಹೋಯ್ತು ಚಿಗುರಿದ ಕನಸು | Plane Crash

ವಿಜಯವಾಣಿ (6)
Published on

Plane Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತಗಳಲ್ಲಿ ಒಂದಾದ ಅಹಮದಾಬಾದ್​ ಏರ್​ ಇಂಡಿಯಾ ಅಪಘಾತ ಸದ್ಯ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. 241 ಪ್ರಯಾಣಿಕರನ್ನು ಹಾಗೂ 24 ವಿದ್ಯಾರ್ಥಿಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ದುರಂತದಲ್ಲಿ ಅಮಾಯಕ ಜೀವಗಳ ಜೊತೆ ನೂರಾರು ಚಿಗುರಿದ್ದ ಕನಸುಗಳು ಸುಟ್ಟು ಭಸ್ಮವಾಗಿವೆ.

ಉನ್ನತ ವಿದ್ಯಾಭ್ಯಾಸ ಪಡೆಯುವ ಉದ್ದೇಶದಲ್ಲಿ 9 ಗಂಟೆಗಳ ಲಂಡನ್​ ಪ್ರಯಾಣ ಕೈಗೊಂಡಿದ್ದ ರಾಜಸ್ಥಾನ ಉದಯ್​ಪುರ ಮೂಲದ ಪಾಯಲ್​ ಕಾಟಿಕ್ ಎಂಬ ಯುವತಿ​, ಸಾವಿಗೀಡಾದ 241 ಪ್ರಯಾಣಿಕರಲ್ಲಿ ಒಬ್ಬರು. ಓದಿ ತಂದೆ-ತಾಯಿಯ ಆಸೆಗೆ ಅಣಿಯಾಗಬೇಕು, ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಏರ್ ಇಂಡಿಯಾ ವಿಮಾನ ಹತ್ತಿದ ಆಕೆ, ಕೆಲವೇ ನಿಮಿಷಗಳಲ್ಲಿ ಪೋಷಕರ ಕಣ್ಣೀರಿಗೆ ಕಾರಣಳಾದಳು. ಈ ಘಟನೆ ಯುವತಿಯ ಕುಟುಂಬದವರು ಮಾತ್ರವಲ್ಲ, ಭಾರತೀಯರ ಕಣ್ಣೀರಿಗೂ ಕಾರಣವಾಗಿದೆ.

ಓದಿನಲ್ಲಿ ಪ್ರಥಮ

ಗುಜರಾತ್​ನ ಹಿಮ್ಮತ್​ನಗರದಲ್ಲಿ ಪೋಷಕರೊಂದಿಗೆ ವಾಸವಿದ್ದ ಪಾಯಲ್​, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್​ ಹೋಗಲು ನಿರ್ಧರಿಸಿದ್ದರು. ಮಗಳ ಉಜ್ವಲ ಭವಿಷ್ಯಕ್ಕಾಗಿ ಹೆತ್ತವರು ಕೂಡ ಒಪ್ಪಿಗೆ ಸೂಚಿಸಿದ್ದರು. ಅಂತೆಯೇ ಅಪ್ಪ-ಅಮ್ಮನ ಆರ್ಶಿವಾದ ಪಡೆದು ವಿಮಾನ ಹತ್ತಿದ ಯುವತಿ ಇಂದು ಇಲ್ಲ ಎಂಬ ಸುದ್ದಿ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಸ್ಥಳೀಯರ ಪ್ರಕಾರ, ಪಾಯಲ್ ಓರ್ವ ಟಾಪರ್​ ವಿದ್ಯಾರ್ಥಿನಿ. ಬಾಲ್ಯದಿಂದಲೂ ಶಾಲೆಯಲ್ಲಿ ಟಾಪರ್​ ಆಗಿ ಮಿಂಚಿದ ಯುವತಿ, ಎಲ್ಲರ ಮೆಚ್ಚುಗೆಗೆ ಅರ್ಹರಾಗಿದ್ದಳು ಎಂದು ಹೇಳಲಾಗಿದೆ.

ಭಾರತದ ಇತಿಹಾಸದಲ್ಲೇ ಇದು ಮಹಾ ದುರಂತ!

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.

ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net