ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ನಟ ಪವನ್ ಕಲ್ಯಾಣ್ 6 ಕೋಟಿ ರೂ.ದೇಣಿಗೆ!

pawan
Published on

ಅಮರಾವತಿ: ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿವೆ. ಹೆಲವೆಡೆ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು ಅಪಾರ ಪ್ರಮಾಣದ ಆಸ್ತ-ಪಾಸ್ತಿ ನಷ್ಟವಾಗಿದೆ.

ಸಂತ್ರಸ್ತರ ನೆರವು ಸೇರಿದಂತೆ ಪರಿಹಾರ ಕಾರ್ಯಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹೀಗಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಚಿರಂಜೀವಿ, ರಾಮ್​ ಚರಣ್​, ಪ್ರಭಾಸ್​, ಅಲ್ಲು ಅರ್ಜುನ್​, ನಂದಮೂರಿ ಬಾಲಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ.

ಈಗ ಆಂಧ್ರಪ್ರದೇಶದ ಡಿಸಿಎಂ, ಜನಸೇನಾ ಮುಖ್ಯಸ್ಥ ಪವನ್​ ಕಲ್ಯಾಣ್​ ಅವರು 6 ಕೋಟಿ ರೂ.ದೇಣಿಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮೊದಲು ಪವನ್​ ಕಲ್ಯಾಣ್​ ಅವರು ಆಂಧ್ರಪ್ರದೇಶ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 1 ಕೋಟಿ ರೂ.ನೀಡುವುದಾಗಿ ತಿಳಿಸಿದರು. ಆ ನಂತರ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಣ ಸಾಕಾಗುವುದಿಲ್ಲ ಎಂದು ಮತ್ತೆ 4 ಕೋಟಿ ರೂ.ನೀಡುವುದಾಗಿ ಡಿಸಿಎಂ ಪವನ್​ ಕಲ್ಯಾಣ್​ ಘೋಷಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ 400 ಪಂಚಾಯತ್​ ಕ್ಷೇತ್ರಗಳಲ್ಲಿ ಪುನರ್​ವಸತಿ ಕಲ್ಪಿಸುವ ಸಲುವಾಗಿ ಪವನ್​ ಕಲ್ಯಾಣ್​ ನೀಡಿದ 4 ಕೋಟಿ ರೂಪಾಯಿ ಬಳಕೆ ಆಗಲಿದೆ. ‘ಪ್ರವಾಹದಿಂದ ಆಗಿರುವ ಹಾನಿ ಗಮನಿಸಿದರೆ 1 ಕೋಟಿ ರೂಪಾಯಿಯಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡಲಿದ್ದೇನೆ’ ಎಂದು ಪವನ್​ ಕಲ್ಯಾಣ್​ ಅವರು ತಿಳಿಸಿದ್ದಾರೆ.

ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಬೇಕೆಂದು ತಮ್ಮ ಕಡೆಯಿಂದ ನಟರು- ರಾಜಕಾರಣಿಗಳು ದೇಣಿಗೆ ನೀಡಬೇಕು ಎಂದು ಪವನ್ ಕಲ್ಯಾಣ್ ಕೋರಿದ್ದಾರೆ.

ನಮ್ಮ ಪಕ್ಕದ ತೆಲಂಗಾಣ ಕೂಡ ಪ್ರವಾಹದಲ್ಲಿ ಸಿಲುಕಿದೆ. ಹಾಗಾಗಿ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನಾನು ನೇರವಾಗಿ ಭೇಟಿ ಮಾಡಿ ಹಣ ನೀಡುತ್ತೇನೆ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net