ಯಕ್ಷಗಾನ ಕಲಾವಿದರಿಗೆ 13 ಕೋ.ರೂ. ನೆರವು : ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾಹಿತಿ

house
Published on

ಬಂಟ್ವಾಳ: ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲಗುತ್ತು ನೇತೃತ್ವದಲ್ಲಿ ಕಲಾವಿದರಿಗೆ ನಿರ್ಮಾಣಗೊಳ್ಳುತ್ತಿರುವ ಪಟ್ಲ ಯಕ್ಷಾಶ್ರಯ-31ನೇ ಮನೆಯನ್ನು ಉದ್ಯಮಿ ರಘುನಾಥ ಸೋಮಯಾಜಿ ಅವರ ಕೊಡುಗೆಯಾಗಿ, ಸರಪಾಡಿ ಗ್ರಾಮದ ಮಠದಬೆಟ್ಟುನಲ್ಲಿ ಗುರುವಾರ ಧರ್ಮಸ್ಥಳ ಮೇಳದ ಕಲಾವಿದ ಚಂದ್ರಶೇಖರ ಸರಪಾಡಿ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಗೃಹಪ್ರವೇಶ ನೆರವೇರಿಸಲಾಯಿತು.

ಕೇಂದ್ರೀಯ ಸಮಿತಿ ಪರವಾಗಿ ಮನೆ ಹಸ್ತಾಂತರಿಸಿದ ಪಟ್ಲ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಮಾತನಾಡಿ, ಫೌಂಡೇಶನ್ ಕಳೆದ 9 ವರ್ಷಗಳಲ್ಲಿ ಯಕ್ಷಗಾನ ಕಲಾವಿದರಿಗೆ ಸುಮಾರು 13 ಕೋ.ರೂ. ವೆಚ್ಚದಲ್ಲಿ ಹಲವು ರೀತಿಯ ನೆರವು ನೀಡಲಾಗಿದ್ದು, ದಾನಿಗಳ ನೆರವಿನಿಂದ ಇದು ಸಾಧ್ಯವಾಗಿದೆ. ಕಲಾವಿದರಿಗೆ 100 ಮನೆಗಳನ್ನು ನಿರ್ಮಿಸುವ ಸ್ಥಾಪಕಾಧ್ಯಕ್ಷರ ಆಶಯದಂತೆ ಈಗಾಗಲೇ 31 ಮನೆ ಹಸ್ತಾಂತರಿಸಲಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಎಲ್ಲ ಮನೆಗಳ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದರು.

ಬೆಂಗಳೂರಿನ ಉದ್ಯಮಿ ಆರ್.ಕೆ.ಭಟ್ ಮಾತನಾಡಿ, ಫೌಂಡೇಶನ್ ಆರಂಭಕ್ಕೆ ಮುನ್ನ ದಾನಿಗಳು ನೀಡಿದ ದಾನ ಸತ್ ಪಾತ್ರರಿಗೆ ತಲುಪುತ್ತದೋ ಎಂಬ ಆತಂಕವಿದ್ದು, ಆದರೆ ಫೌಂಡೇಶನ್ ಕಾರ್ಯವೈಖರಿ ನೋಡಿದ ಬಳಿಕ ಅಂತಹ ಆತಂಕ ದೂರವಾಗಿದೆ ಎಂದರು.

ಫೌಂಡೇಶನ್ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ, ಗೌರವಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ವೇದಿಕೆಯಲ್ಲಿದ್ದರು. ಕಲಾವಿದ ಚಂದ್ರಶೇಖರ ಸರಪಾಡಿ ದಂಪತಿ, ಹೆತ್ತವರಾದ ಗಂಗಯ್ಯ ನಾಯ್ಕ, ಪ್ರೇಮಾ, ಉಮೇಶ್ ಮಠದಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಫೌಂಡೇಶನ್ ಸರಪಾಡಿ ಘಟಕದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಧನಂಜಯ ಶೆಟ್ಟಿ ನಾಡಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net