

ಲಖನೌ: ಆ್ಯಂಬುಲೆನ್ಸ್ ಚಾಲಕನೊಬ್ಬ ರೋಗಿಯ ಪತ್ನಿಯೊಂದಿಗೆ ಅನುಚಿತವಾಗಿ ವರ್ತಿಸಿ ಆಕೆಯ ಪತಿಗೆ ಅಳವಡಿಸಿದ್ದ ಆಕ್ಸಿಜನ್ ತೆಗೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದಿದೆ. ಈ ಘಟನೆಯಲ್ಲಿ ರೋಗಿ ಪ್ರಾಣ ಕಳೆದುಕೊಂಡಿದ್ದಾನೆ.
ಸಿದ್ಧರ್ಥನಗರ ಜಿಲ್ಲೆಯ ಮಹಿಳೆ ಆ.28 ರಂದು ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಪತಿಯನ್ನು ಗಾಜಿಪುರದ ಅರಾವಳಿ ಮಾರ್ಗದಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಆಸ್ಪತ್ರೆ ವೆಚ್ಚ ಭರಿಸಲಾಗದೆ ತನ್ನ ಗಂಡನನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ವೈದ್ಯರಲ್ಲಿ ವಿನಂತಿಸಿದ್ದಳು. ಹಾಗಾಗಿ ಆಕೆಗೆ ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ಚಾಲಕನ ಮೊಬೈಲ್ ನಂಬರ್ ಕೊಟ್ಟಿದ್ದರು.
ಮಹಿಳೆ ತನ್ನ ಪತಿ ಯನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಸಿದ್ಧಾರ್ಥನಗರದಲ್ಲಿರುವ ತನ್ನ ಮನೆಗೆ ಹೊರಟಳು. ಪ್ರಯಾಣ ಆರಂಭಿಸುವ ಮುನ್ನ ಚಾಲಕ ತನ್ನೊಂದಿಗೆ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಬೇಕು. ಇಲ್ಲವಾದರೆ ಪೊಲೀಸರು ನಿನ್ನನ್ನು ವಾಹನದಿಂದ ಕೆಳಗಿಳಿಸಿಬಿಡುತ್ತಾರೆ ಎಂದು ಹೇಳಿದ್ದಾನೆ. ಅದರಂತೆ ಮಹಿಳೆ ಮುಂದೆ ಕುಳಿತಿದ್ದು, ಮಾರ್ಗ ಮಧ್ಯೆ ಚಾಲಕ ಮತ್ತು ಆತನ ಸಹಾಯಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸತೊಡಗಿದ್ದಾರೆ. ಇದಕ್ಕೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಇವರ ವರ್ತನೆಯನ್ನು ಗಮನಿಸಿದ ಪತಿ ಹಾಗೂ ಆಕೆಯ ಸಹೋದರ ಕಿರುಚಿದ್ದಾರೆ. ಹೀಗಾಗಿ ಚಾವಣಿ ಪೊಲೀಸ್ ಠಾಣೆ ಬಳಿ ಆ್ಯಂಬುಲೆನ್ಸ್ ನಿಲ್ಲಿಸಿ ರೋಗಿಯನ್ನು ರಸ್ತೆಬದಿ ಇಳಿಸಿ ಆಕ್ಸಿಜನ್ ತೆಗೆದು ತೆರಳಿದ್ದಾರೆ. ಮಹಿಳೆಯ ಬಳಿ 10 ಸಾವಿರ ನಗದು. ಒಂದಷ್ಟು ಚಿನ್ನಾಭರಣ ಸಹ ಕಿತ್ತುಕೊಂಡು ಹೋಗಿದ್ದಾರೆ.
ಬಳಿಕ ಆ ಮಹಿಳೆ ಮತ್ತು ಆಕೆಯ ಸಹೋದರ 112 ಮತ್ತು 108 ಸಂಖ್ಯೆಗಳಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿಸಿದ್ದು, ಪೊಲೀಸರು ತಕ್ಷಣ ಸ್ಪಂದಿಸಿ ಸ್ಥಳಕ್ಕೆ ತಲುಪಿ ಆಕೆಯ ಪತಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆದರೆ, ಅಲ್ಲಿ ಆತನ ಸ್ಥಿತಿ ಹದಗೆಟ್ಟಿದ್ದು, ಬಳಿಕ ಗೋರಖ್‌ಪುರ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ. ಆದರೆ ಮಾರ್ಗಮಧ್ಯೆ ಆತ ಕೊನೆಯುಸಿರೆಳೆದಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.