

ನವದೆಹಲಿ: ನಾವೆಲ್ಲರೂ ಸಣ್ಣವರಾಗಿದ್ದಾಗ ಸಾಧು ಬಳಿ ಬೆಳೆದ ಗಿಳಿಯ ವರ್ತನೆ ಹಾಗೂ ಕಟುಕನ ಬಳಿ ಬೆಳೆದ ಗಿಳಿಯ ವರ್ತನೆ ಕುರಿತ ಕತೆಯನ್ನು ಕೇಳಿರುತ್ತೇವೆ. ಅಲ್ಲದೆ, ಗಿಳಿಗಳು ಜನರ ಮಾತು, ಹಾಡುಗಳನ್ನು ಅನುಕರಿಸುತ್ತವೆ ಎಂಬುದೂ ಗೊತ್ತಿರುವ ಸಂಗತಿ.
ಆದರೆ, ಮುಂಬೈನಲ್ಲಿ ವ್ಯಕ್ತಿಯೊಬ್ಬರು ಗಿಟಾರ್ ನುಡಿಸಲು ಆರಂಭಿಸಿದರೆ, ಅದೆಲ್ಲಿಯೋ ಇರುವ ಗಿಳಿಗಳು ಅವರ ಮನೆಯ ಕಿಟಕಿ ಬಳಿಗೆ ಬಂದು ಗಿಟಾರ್ನ ಹಿಮ್ಮೇಳಕ್ಕೆ ತಕ್ಕಂತೆ ಹಾಡು ಹಾಡಲಾರಂಭಿಸುತ್ತವೆ!
ಈ ಗಿಳಿಗಳಿಗೆ ಯಾವುದೇ ತರಬೇತಿ ನೀಡದಿದ್ದರೂ, ಗಿಟಾರ್ನ ಸದ್ದು ಕೇಳುತ್ತಲೇ ಕಿಟಕಿ ಬಳಿಗೆ ಹಾರಿ ಬಂದು ಹಾಡುತ್ತವೆ ಎಂದು ಜತಿನ್ ತಾಲೂಕ್ದಾರ್ ಎಂಬುವರು ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಗಿಳಿಗಳು ಹಾಡುತ್ತಿರುವ ವಿಡಿಯೋ ತುಣಕನ್ನೂ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಗಿಳಿಗಳಿಗೆ ತಾವು ಜಿಮ್ ಮತ್ತು ಕೈರಿ ಎಂದು ಹೆಸರು ಇಟ್ಟಿರುವುದಾಗಿಯೂ ಹೇಳಿದ್ದಾರೆ. ಕಾಡು ಗಿಳಿಗಳು ಸಾಮಾನ್ಯವಾಗಿ ನಾಚಿಕೆಯ ಸ್ವಭಾವದವಾಗಿರುತ್ತವೆ. ಆದರೂ ಈ ಕಾಡು ಗಿಳಿಗಳು ಈಗ ತಮಗೆ ಇಷ್ಟು ಹತ್ತಿರಾಗಿರುವ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.