More

    ಲಡಾಖ್​ ಬಿಕ್ಕಟ್ಟಿನ ನಡುವೆಯೂ ಭಾರತದಿಂದ 2 ರಸ್ತೆಗಳ ಕಾಮಗಾರಿ ಜಾರಿ

    ನವದೆಹಲಿ: ಲಡಾಖ್​ ಪ್ರದೇಶದಲ್ಲಿ ಚೀನಾದೊಂದಿಗಿನ ಬಿಕ್ಕಟ್ಟು ತೀವ್ರಗೊಂಡಿದ್ದರೂ ಭಾರತ ಎದೆಗುಂದಿಲ್ಲ. ಈ ಭಾಗದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸುವಂತೆ ಬಿಕ್ಕಟ್ಟು ಪರಿಹಾರದ ಮಾತುಕತೆ ವೇಳೆ ಚೀನಿಯರು ಷರತ್ತು ಹಾಕುತ್ತಿದ್ದರೂ ಭಾರತ ಮಾತ್ರ ಇದಾವುದಕ್ಕೂ ಜಗ್ಗದೆ ತನ್ನ ವ್ಯಾಪ್ತಿಯಲ್ಲಿ ಆರಂಭಿಸಲಾಗಿರುವ 2 ಪ್ರಮುಖ ರಸ್ತೆಗಳ ನಿರ್ಮಾಣ ಕಾಮಗಾರಿಯನ್ನು ಅಬಾಧಿತವಾಗಿ ಮುಂದುವರಿಸಿದೆ. ತನ್ಮೂಲಕ ಯಾವುದೇ ರೀತಿಯ ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ ಎಂದು ಚೀನಿಯರಿಗೆ ಸಂದೇಶವನ್ನು ರವಾನಿಸಿದೆ.

    ಸಬ್​ ಸೆಕ್ಟರ್​ ನಾರ್ಥ್​ (ಎಸ್​ಎಸ್​ಎನ್​) ಎಂದು ಮಿಲಿಟರಿಯವರು ಗುರುತಿಸುವ ಪ್ರದೇಶದಲ್ಲಿ ಮುಂಚೂಣಿ ನೆಲೆಗಳಿಗೆ ಸುಲಭ ಸಂಪರ್ಕ ಒದಗಿಸುವ ರೀತಿಯ ರಸ್ತೆಗಳ ನಿರ್ಮಾಣ ಕಾಮಗಾರಿ ಅಬಾಧಿತವಾಗಿ ಮುಂದುವರಿದಿರುವುದಾಗಿ ಭದ್ರತಾಪಡೆಗಳ ಮೂಲಗಳು ತಿಳಿಸಿವೆ.

    ಡರ್ಬುಕ್​-ದೌಲತ್​ ಬೇಗ್​ ಓಲ್ಡೀ (ಡಿಎಸ್​-ಡಿಬಿಒ) ರಸ್ತೆ ಉತ್ತರ ಭಾಗದ ತುತ್ತ ತುದಿಯಲ್ಲಿರುವ ದೌಲತ್​ ಬೇಗ್​ ಓಲ್ಡೀಯ ಹೊರಠಾಣೆಗೆ ನೇರವಾಗಿ ಸಂಪರ್ಕ ಒದಗಿಸುತ್ತದೆ. ಈ ರಸ್ತೆಯ ಜತೆಗೆ ಸಸೊಮಾದಿಂದ ಸಾಸೆರ್​ ಲಾವರೆಗೆ ಮತ್ತೊಂದು ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಎರಡನೇ ರಸ್ತೆಯು ಕಾರಕೋರಾಂ ಪಾಸ್​ ಬಳಿಯಿಂದ ಡಿಬಿಒಗೆ ಸಂಪರ್ಕ ಒದಗಿಸುವ ಪರ್ಯಾಯ ಮಾರ್ಗ ಎನಿಸಿದೆ. ಈ ರಸ್ತೆಯು ಡಿಬಿಒಕ್ಕೆ ನೃಋತ್ಯ ಭಾಗದಿಂದ ಸಂಪರ್ಕ ಒದಗಿಸುತ್ತದೆ ಎಂದು ವಿವರಿಸಿದ್ದಾರೆ.

    ಇದನ್ನೂ ಓದಿ: ನಮ್ಮ ಉತ್ಪನ್ನಗಳು ಇಲ್ಲದೆ ಭಾರತೀಯರ ಜೀವನ ದುಸ್ಸಾಧ್ಯ ಎಂದ ಚೀನಾ

    ಈ ಎರಡು ರಸ್ತೆಗಳನ್ನು ಬಾರ್ಡರ್​ ರೋಡ್ಸ್​ ಆರ್ಗನೈಜೇಷನ್​ (ಬಿಆರ್​ಒ) ನಿರ್ಮಿಸುತ್ತಿದ್ದು, ಇದಕ್ಕಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಿಂದ 11,815 ಕಾರ್ಮಿಕರನ್ನು ಚೀನಾದ ಗಡಿಗೆ ಹೊಂದಿಕೊಂಡಿರುವ ಲಡಾಖ್​ ಪ್ರದೇಶಕ್ಕೆ ಸಾಗಿಸಿದೆ ಎಂದು ಹೇಳಿದ್ದಾರೆ.
    ಗಲ್ವಾನ್​ ಕಣಿವೆಯಲ್ಲಿ ಚೀನಾದ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದಾರೆ. ಇದರಿಂದಾಗಿ 255 ಕಿ.ಮೀ. ಉದ್ದದ ಡಿಎಸ್​-ಡಿಬಿಒ ರಸ್ತೆ ನಿರ್ಮಾಣ ಕಾಮಗಾರಿಗೆ ಅಡ್ಡಿಯುಂಟಾಗುವ ಆತಂಕ ಎದುರಾಗಿದೆ. ಅಲ್ಲದೆ, ಈ ರಸ್ತೆಯ ಬದಲು ಡಿಬಿಒಗೆ ಪರ್ಯಾಯ ರಸ್ತೆ ನಿರ್ಮಿಸುವಂತೆ ಚೀನಿಯರು ಒತ್ತಡ ಹೇರುತ್ತಿದ್ದಾರೆ.

    ಸಸೊಮಾರಿಂದ ಸಾಸೇರ್​ ಲಾಗೆ 17,800 ಅಡಿ ಎತ್ತರದಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಯ ಕಾಮಗಾರಿ ಕೈಗೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಇದು ಹಾರ್ಡನೆಸ್​ ಇಂಡೆಕ್ಸ್​-3ರ (ಬೆಟ್ಟ ಪ್ರದೇಶದಲ್ಲಿರುವ ಬಂಡೆಗಳ ಗಟ್ಟಿತನವನ್ನು ಅಳೆಯುವ ಮಾಪಕ) ವ್ಯಾಪ್ತಿಯಲ್ಲಿ ಈ ಪ್ರದೇಶ ಬರುವುದು ಇದಕ್ಕೆ ಕಾರಣ. ಅತ್ಯಂತ ಗಟ್ಟಿಯಾದ ಪ್ರದೇಶದಲ್ಲಿ ಬಿಆರ್​ಒ ಇದುವರೆಗೂ ಕೈಗೊಂಡಿರುವ ಯೋಜನೆ ಇದು ಎಂದು ಹೇಳಲಾಗುತ್ತಿದೆ. ಈ ರಸ್ತೆಯನ್ನು ಬ್ರಾಂಗ್​ ಸಾ, ಮರ್ಗೋ ಮತ್ತು ಡಿಬಿಒಗೆ ವಿಸ್ತರಿಸಲು ಸಾಧ್ಯವಿದೆ. ಡಿಬಿಒಗೆ ನಿಧಾನವಾಗಿ ವಿಸ್ತರಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಸಬ್​ ಸೆಕ್ಟರ್​ ನಾರ್ಥ್​ನಲ್ಲಿ ಡಿಬಿಒಗೆ ಪರ್ಯಾಯ ಮಾರ್ಗ ನಿರ್ಮಿಸುವ ಅವಶ್ಯಕತೆ ತುಂಬಾ ಇದೆ. ಏನಾದರೂ ಯುದ್ಧವಾದಲ್ಲಿ ಚೀನಿ ಯೋಧರು ಡಿಎಸ್​-ಡಿಬಿಒ ರಸ್ತೆಯನ್ನು ಅತಿಕ್ರಮಿಸಿ, ಯೋಧರು ಮತ್ತು ಯುದ್ಧೋಪಕರಣಗಳ ಸಾಗಣೆಗೆ ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ದಟ್ಟವಾಗಿರುವುದು ಇದಕ್ಕೆ ಕಾರಣ. ಅದೇ ಸಾಸೋಮಾದಿಂದ ಸಾಸೇರ್​ ಲಾ ನಡುವಿನ ರಸ್ತೆಯನ್ನು ಡಿಬಿಒವರೆಗೆ ವಿಸ್ತರಿಸಿದರೆ ತುಂಬಾ ಅನುಕೂಲವಿದೆ. ಆದರೆ ಈ ರಸ್ತೆ ನಿರ್ಮಾಣ ಇಂಜಿಯರಿಂಗ್​ ಹಾಗೂ ಸದ್ಯ ಲಭ್ಯ ಇರುವ ತಂತ್ರಜ್ಞಾನಕ್ಕೆ ಬಹುದೊಡ್ಡ ಸವಾಲು ಎನಿಸಿದೆ. ಈ ಮಾರ್ಗದಲ್ಲಿ ಕೆಲವು ಕಡೆ ಸುರಂಗಮಾರ್ಗಗಳನ್ನು ನಿರ್ಮಿಸುವ ಅವಶ್ಯಕತೆ ಇರುವುದು ಇದಕ್ಕೆ ಕಾರಣ ಎಂದು ನಾರ್ದರನ್​ ಆರ್ಮಿ ಕಮಾಂಡರ್​ ಆಗಿದ್ದ ಲೆಫ್ಟಿನೆಂಟ್​ ಜನರಲ್​ (ನಿವೃತ್ತ) ಬಿ.ಎಸ್​. ಜಸ್ವಾಲ್​ ಹೇಳಿದ್ದಾರೆ.

    ಶೂಟಿಂಗ್​ ಶುರು ಮಾಡ್ಕೊಳ್ಳಿ … ತೆಲಂಗಾಣ ಸರ್ಕಾರದ ಗ್ರೀನ್​ ಸಿಗ್ನಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts