

ನವದೆಹಲಿ : ಸಂಸತ್ತಿನಲ್ಲಿ ಕಾನೂನುಗಳ ಬಗ್ಗೆ ರಚನಾತ್ಮಕ ಚರ್ಚೆಯಾಗುತ್ತಿಲ್ಲ. ಬೇಸರ ಮೂಡಿಸುವ ಪರಿಸ್ಥಿತಿ ಉಂಟಾಗಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ.ರಮಣ ಇಂದು ಬೇಸರ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಜೆಐ ಮಾತನಾಡುತ್ತಿದ್ದರು.
"...ಆಗಿನ ಯಾವುದೇ ರಾಷ್ಟ್ರೀಯ ನಾಯಕರನ್ನು ತೆಗೆದುಕೊಳ್ಳಿ - ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರೆಲ್ಲ ವಕೀಲ ಸಮುದಾಯಕ್ಕೆ ಸೇರಿದವರು. ಮೊದಲ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಬಹುತೇಕರು ವಕೀಲರಾಗಿದ್ದರು. ಆದರೆ ದೃರದೃಷ್ಟವಶಾತ್, ಕಾಲಾನುಕ್ರಮದಲ್ಲಿ ಏನಾಗುತ್ತಿದೆ ಎಂದು ನೀವು ನೋಡಿದ್ದೀರಿ. ಆಗ ನಡೆಯುತ್ತಿದ್ದ ಚರ್ಚೆಗಳನ್ನು ಈಗಿನದಕ್ಕೆ ಹೋಲಿಸಿದರೆ ತಿಳಿಯುತ್ತದೆ. ಆಗ ಬುದ್ಧಿವಂತಿಕೆಯ ರಚನಾತ್ಮಕ ಚರ್ಚೆಗಳು ನಡೆಯುತ್ತಿದ್ದವು. ಆದರೆ ಈಗ ಬೇಸರ ಮೂಡಿಸುವಂತಹ ಪರಿಸ್ಥಿತಿ ಇದೆ" ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹೇಳಿದ್ದಾರೆ.
ಈಗ ಕಾನೂನುಗಳ ಬಗ್ಗೆ ಸರಿಯಾದ ಚರ್ಚೆಯಿಲ್ಲ. ಅವುಗಳನ್ನು ಏಕೆ ಮಾಡಿದ್ದಾರೆ ಎಂಬ ಸ್ಪಷ್ಟತೆ ಇಲ್ಲ. ಇದು ಜನರಿಗಾಗಿರುವ ನಷ್ಟ. ಸದನಗಳಲ್ಲಿ ವಕೀಲರು, ಬುದ್ಧಿಜೀವಿಗಳು ಇಲ್ಲದಿದ್ದರೆ ಈ ರೀತಿ ಆಗುತ್ತದೆ. ಆದ್ದರಿಂದ ವಕೀಲ ಸಮುದಾಯ ಸಾರ್ವಜನಿಕ ಸೇವೆಯತ್ತ ಗಮನ ಹರಿಸಬೇಕು ಎಂದು ಸಿಜೆಐ ವಕೀಲರಿಗೆ ಕರೆ ನೀಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ. (ಏಜೆನ್ಸೀಸ್)