

ಬೆಂಗಳೂರು: ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್3 ವಿಭಾಗದಲ್ಲಿ ಭಾರತದ ನಿತೇಶ್ ಕುಮಾರ್ ನೇರ ಸೆಟ್ಗಳಿಂದ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು ಸೋಲಿಸಿ ಚೊಚ್ಚಲ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.
ಒಂದು ಗಂಟೆ 20 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಹರಿಯಾಣದ 29 ವರ್ಷದ ನಿತೇಶ್ ಕುಮಾರ್ 21-14, 18-21, 23-21 ಅಂಕಗಳಿಂದ ಟೋಕಿಯೋ ಬೆಳ್ಳಿ ಪದಕ ವಿಜೇತ ಡೇನಿಯಲ್ ಬೆಥಲ್ ಅವರನ್ನು ಸೋಲಿಸಿದ್ದಾರೆ. ಇದರೊಂದಿಗೆ ಭಾರತ ಪ್ರಸಕ್ತ ಪ್ಯಾರಾಲಿಂಪಿಕ್ಸ್ನಲ್ಲಿ 2 ಚಿನ್ನ,3 ಬೆಳ್ಳಿ,4 ಕಂಚಿನ ಸೇರಿ ಒಟ್ಟು 9 ಪದಕಗಳನ್ನು ಗಳಿಸಿದಂತಾಗಿದೆ.
ಭಾನುವಾರ ನಡೆದ 48 ನಿಮಿಷಗಳ ಸೆಮಿಫೈನಲ್ ಪಂದ್ಯದಲ್ಲಿ ನಿತೇಶ್ ನೇರ ಗೇಮ್ಗಳಿಂದ ಜಪಾನ್ನ ಆಟಗಾರ ದೈಸುಕೆ ಫುಜಿಹಾರ ಅವರನ್ನು 21-16, 21-12 ರಿಂದ ಸೋಲಿಸಿದ್ದರು.
2009ರಲ್ಲಿ ವಿಶಾಖಪಟ್ಟಣದಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ ನಿತೇಶ್ ಕುಮಾರ್ ಅವರು ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು.
2020ರ ಟೋಕಿಯೊದಲ್ಲಿ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಪ್ರಮೋದ್ ಭಗತ್ ಚಾಂಪಿಯನ್ ಆಗಿದ್ದರು. ಆದರೆ ವಿಶ್ವ ಬ್ಯಾಡ್ಮೀಟನ್ನ ಡೋಪಿಂಗ್ ನಿಯಮ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಪ್ರಮೋದ್ ಭಗತ್ ಅವರ ಮೇಲೆ 18 ತಿಂಗಳ ಕಾಲ ನಿಷೇಧ ಹೇರಲಾಗಿದೆ. ಇದರಿಂದ ಪ್ಯಾರೀಸ್ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದರು.