

ಹೈದರಾಬಾದ್: ಪಕ್ಕದ ತೆಲಂಗಾಣದಲ್ಲಿ ಭಾರೀ ಮಳೆ ಸುರಿದಿದ್ದು, ಸೋಮವಾರದ ಮಳೆ ಅವಾಂತರದಿಂದಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗದ್ದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ನಿರ್ಧರಿಸಿದ್ದಾರೆ.
ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿದ ಐಟಿ ಮತ್ತು ಕೈಗಾರಿಕೆ ಸಚಿವ ಡಿ.ಶ್ರೀಧರ್ ಬಾಬು, ಹಾನಿ ಕುರಿತಂತೆ ವರದಿ ಬಂದ ಬಳಿಕ ತಿಳಿದುಬರಲಿದೆ. ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಸಿಎಂ ರೇವಂತ್ ರೆಡ್ಡಿ ಮಳೆ ಸಂಬಂಧಿತ ಅವಘಡಗಳಲ್ಲಿಮೃತಪಟ್ಟವರ ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಪ್ರವಾಹದಿಂದ ಉಂಟಾಗಿರುವ ಹಾನಿ ಕುರಿತಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯದ ಪ್ರವಾಹದ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮನವಿ ಮಾಡಲಾಗುವುದು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾಹದಿಂದ ಹಾನಿ ಅನುಭವಿಸಿದ ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿಯೂ ಅದು ಹೇಳಿದೆ. ಅಲ್ಲದೆ, ಮೇಕೆ ಮತ್ತು ಕುರಿಗಳನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಲಾಗುವುದು ಅದು ತಿಳಿಸಿದೆ. ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸುವಂತೆ ಮತ್ತು ಮಳೆಯಿಂದ ತತ್ತರಿಸಿರುವ ನಾಗರಿಕರಿಗೆ ಪರಿಹಾರ ನೀಡಲು ಜಿಲ್ಲೆಗಳಲ್ಲಿ ಕಾಲ್ ಸೆಂಟರ್ ಸ್ಥಾಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಪ್ರವಾಹ ಪೀಡಿತ ಖಮ್ಮಂ, ಭದ್ರಾದ್ರಿ ಕೊತಗುಡೆಂ, ಮಹಬೂಬಾಬಾದ್ ಮತ್ತು ಸೂರ್ಯಪೇಟ್ ಜಿಲ್ಲೆಗಳಿಗೆ ಸಿಎಂ ರೇವಂತ್ ರೆಡ್ಡಿ ತಕ್ಷಣವೇ ಐದು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಇಲ್ಲಿನ ಸರ್ಕಾರದ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಭಾರೀ ಮಳೆಯ ಸಂದರ್ಭದಲ್ಲಿ ತುರ್ತು ಸೇವೆಗಳಿಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗೆ ಸಮಾನವಾಗಿ ಎಂಟು ಪೊಲೀಸ್ ಬೆಟಾಲಿಯನ್‌ಗಳಿಗೆ ತರಬೇತಿ ನೀಡಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಸಿಎಂ ರೇವಂತ್ ರೆಡ್ಡಿ ಅವರು ಖಮ್ಮಂ ಮತ್ತು ಇತರ ಜಿಲ್ಲೆಗಳಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ರಸ್ತೆ ಮಾರ್ಗವಾಗಿ ತೆರಳಿದ್ದಾರೆ.