

ಅನಂತಪುರ: ಹಿಂದೂಪುರಂ ಎಂಪಿ ಟಿಕೆಟ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಪರಿಪೂರ್ಣಾನಂದ ಸ್ವಾಮಿಗೆ ಕೊನೆಗೂ ನಿರಾಸೆಯಾಗಿದೆ. ಟಿಡಿಪಿ-ಜನಸೇನಾ-ಬಿಜೆಪಿ ಮೈತ್ರಿ ಅಂಗವಾಗಿ ಆ ಸ್ಥಾನ ಟಿಡಿಪಿ ಪಾಲಾಗಿದೆ. ಇದಲ್ಲದೆ, ಬಿಜೆಪಿ ಘೋಷಿಸಿದ ಆರು ಸ್ಥಾನಗಳ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗದ ಕಾರಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
''ಹಿಂದೂಪುರಂನಿಂದ ಸಂಸದ ಅಥವಾ ಶಾಸಕ ಸ್ಥಾನಕ್ಕೆ ಟಿಕೆಟ್ ನೀಡುವಂತೆ ಪುರಂದೇಶ್ವರಿ ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಟಿಡಿಪಿ ಮತ್ತು ಜನಸೇನಾ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೊದಲೇ ನಾನು ಹಿಂದೂಪುರಂ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದೆ. ಹೀಗಾಗಿಯೇ ವರಿಷ್ಠರ ಬಳಿ ಅಭಿಪ್ರಾಯ ತಿಳಿಸಲು ಬಂದಿದ್ದೇನೆ'' ಎಂದರು.
ಬೆಳಗ್ಗೆ ಬಂದವರು ಮಧ್ಯಾಹ್ನ ಅಭ್ಯರ್ಥಿಗಳಾಗುತ್ತಾರಾ? ಎಂದು ಅವರು ಅಸಹನೆ ವ್ಯಕ್ತಪಡಿಸಿದರು. ಮೈತ್ರಿಯಿಂದಾಗಿ ಬಿಜೆಪಿ ಕೂಡ ನಿರ್ಧರಿಸಲಾಗದ ಪರಿಸ್ಥಿತಿಯಲ್ಲಿದೆ ಎಂದರು.
ಹಿಂದೂಪುರಂನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಬಿಜೆಪಿ ಟಿಕೆಟ್ ನೀಡಿದರೆ ಪಕ್ಷದ ಪರವಾಗಿ ಸಂಸದನಾಗುತ್ತೇನೆ, ಇಲ್ಲದಿದ್ದಲ್ಲಿ ಸ್ವತಂತ್ರವಾಗಿ ಸಂಸದ, ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ ಎಂದು ಪರಿಪೂರ್ಣಾನಂದ ಸ್ವಾಮಿ ಹೇಳಿದರು.
ಏತನ್ಮಧ್ಯೆ, ಟಿಡಿಪಿ ನಾಯಕ ಬಿಕೆ ಪಾರ್ಥಸಾರಿಥಿ ಹಿಂದೂಪುರಂ ಸಂಸತ್ತಿಗೆ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಚಿತ್ರನಟ ಬಾಲಕೃಷ್ಣ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಲಿದ್ದಾರೆ.
ಇದಕ್ಕೂ ಮೊದಲು ಪೆನುಗೊಂಡದಲ್ಲಿ ಪರಿಪೂರ್ಣಾನಂದ ಸ್ವಾಮಿ ಮಾತನಾಡಿ, ಹಿಂದೂಪುರಂನಿಂದ ಏಕೆ ಸ್ಪರ್ಧಿಸಲು ಬಯಸುತ್ತಿದ್ದೇನೆಂದರೆ, ದಕ್ಷಿಣದಲ್ಲಿ ಹಿಂದೂಪುರಂ ಅತ್ಯಂತ ಪ್ರಮುಖ ಸ್ಥಳವಾಗಿದೆ. ‘ಹಿಂದೂಪುರಂ’ಗೆ ಹಿಂದು ಎಂಬ ಹೆಸರಿದ್ದು, ಅಲ್ಲಿಂದ ಸ್ಪರ್ಧಿಸಲು ಬಯಸುವುದಾಗಿ ಹೇಳಿದರು.
ಆರಂಭದಲ್ಲಿ ಬಿಜೆಪಿ ನಾಯಕತ್ವ ತಮಗೆ ಹಿಂದೂಪುರಂ ಎಂಪಿ ಟಿಕೆಟ್ ನೀಡುವುದಾಗಿ ಹೇಳಿದ್ದರೂ, ಮೈತ್ರಿಯ ಭಾಗವಾಗಿ ಕೈ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ಆದರೆ, ಈ ಸ್ಥಾನದಿಂದ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ ಎಂದ ಅವರು, ಈಗಾಗಲೇ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.