ಬಿಗ್​ ಬಾಸ್​ ಮತ್ತೆ ಶುರು; ಪರಮೇಶ್ವರ್​ ಗುಂಡ್ಕಲ್​ ನೀಡಿರುವ ಮಾಹಿತಿ ಇಲ್ಲಿದೆ...

ಬಿಗ್
Published on

ಬೆಂಗಳೂರು: ನಿರೂಪಕ ಕಿಚ್ಚ ಸುದೀಪ್​ ಗೈರು, ಅರ್ಧಕ್ಕೆ ಮೊಟಕಾದ ಶೋ.. ಹೀಗೆ ಈ ಸಲದ ಬಿಗ್​ ಬಾಸ್​ ಸೀಸನ್​ 8 ಹಲವು ಹೊಸತುಗಳಿಗೆ ಸಾಕ್ಷಿಯಾಗಿತ್ತು. ಹೀಗಿರುವಾಗಲೇ ಶೋ ಮತ್ತೆ ಆರಂಭವಾಗಲಿದೆ ಎಂದು ವಿಜಯವಾಣಿಯೇ ಸುದ್ದಿ ಪ್ರಕಟಿಸಿತ್ತು, ಇದೀಗ ಅದು ಅಧಿಕೃತವಾಗಿದೆ. ವೀಕ್ಷಕರಿಗೆ ಮತ್ತಷ್ಟು ಹೊಸತನವನ್ನುನೀಡಲು ಕರ್ಲಸ್​ ಕನ್ನಡ ವಾಹಿನಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದಕ್ಕೆ ಪೂರಕವೆಂಬಂತೆ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಒಂದಷ್ಟು ಮಾಹಿತಿ ನೀಡಿದ್ದಾರೆ.

ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ.
ಇದೊಂಥರಾ ಎರಡನೇ ಇನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್‍ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು.. ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.
ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ.‘ ಎಂದಿದ್ದಾರೆ.

ಹಾಗಾದರೆ, ಶೋ ಯಾವಾಗಿನಿಂದ ಶುರು..? ಈ ವಿಚಾರವನ್ನು ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಕರೊನಾ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆ. ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ 72ನೇ ದಿನಕ್ಕೆ ಮೊಟಕುಗೊಂಡಿದ್ದ ಈ ಶೋ, ಇದೀಗ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲಿದೆ. ಸ್ಪರ್ಧಿಗಳಾದ ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್​, ರು ಗೌಡ, ಶುಭಾ ಪೂಂಜ, ವೈಷ್ಣವಿ ಗೌಡ, ಪ್ರಶಾಂತ್​ ಸಂಬರಗಿ, ಶಮಂತ್​ ಗೌಡ, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ, ಅರವಿಂದ್​, ದಿವ್ಯಾ ಸುರೇಶ್​ ಮತ್ತೆ ಬಿಗ್​ಬಾಸ್​ ಮನೆಗೆ ಎಂಟ್ರಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net