

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ ಕೈಜೋಡಿಸಿದ್ದು, ಆಕ್ಸಿಜನ್ ಸಿಲಿಂಡರ್, ಬೆಡ್ ಮತ್ತು ಕರೊನಾ ಕಿಟ್ಗಳ ಖರೀದಿಗಾಗಿ ಗೌಪ್ಯ ಮೊತ್ತವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾರೆ. ಗುರುಗ್ರಾಮ ಮೂಲದ ಎನ್ಜಿಒ ಸಂಸ್ಥೆ ಹೇಮಕುಂಟ್ ಫೌಂಡೇಷನ್ಗೆ ಈ ಮೊತ್ತವನ್ನು ನೀಡುವುದಾಗಿ 23 ವರ್ಷದ ಪಂತ್ ಹೇಳಿದ್ದಾರೆ.
ಹೇಮಕುಂಟ್ ಫೌಂಡೇಷನ್ಗೆ ಬೆಡ್ ಸಹಿತ ಆಕ್ಸಿಜನ್ ಬೆಡ್ ಒದಗಿಸಲು ನಾನು ಹಣಕಾಸು ನೆರವು ನೀಡುತ್ತಿರುವೆ. ಅಲ್ಲದೆ ದೇಶದೆಲ್ಲೆಡೆ ಕೋವಿಡ್ನಿಂದ ಬಳಲುತ್ತಿರುವವರಿಗೆ ಕೋವಿಡ್ ಪರಿಹಾರ ಕಿಟ್ ಒದಗಿಸಲು ಕೂಡ ನೆರವಾಗುತ್ತಿರುವೆ ಎಂದು ರಿಷಭ್ ಪಂತ್ ಟ್ವಿಟರ್ನಲ್ಲಿ ತಿಳಿಸಿದ್ದಾರೆ.
ಕರೊನಾ ಸೋಂಕಿನ ವಿರುದ್ಧ ಆರೋಗ್ಯ ಇಲಾಖೆ ಸಿಬ್ಬಂದಿ ವಿಶ್ರಾಂತಿ ರಹಿತ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ. ಒಗ್ಗಟ್ಟಿನ ಶಕ್ತಿ ಏನೆಂಬುದನ್ನು ನಾನು ಕ್ರೀಡೆಯಿಂದ ಅರಿತುಕೊಂಡಿರುವೆ ಎಂದು ಇತ್ತೀಚೆಗೆ ಅರ್ಧಕ್ಕೆ ಸ್ಥಗಿತಗೊಂಡ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಿದ್ದ ಪಂತ್ ಹೇಳಿದ್ದಾರೆ. ಎಲ್ಲರೂ ಮನೆಯಲ್ಲೇ ಇರಿ ಮತ್ತು ಸುರತವಾಗಿರಿ ಎನ್ನುವ ಜತೆಗೆ ಪಂತ್, ಸಾಧ್ಯವಾದಾಗ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಹೇಳಿದ್ದಾರೆ.
ಈ ಮುನ್ನ ವಿರಾಟ್ ಕೊಹ್ಲಿ, ಶಿಖರ್ ಧವನ್, ಜೈದೇವ್ ಉನಾದ್ಕತ್, ಹಾರ್ದಿಕ್ ಪಾಂಡ್ಯ ಮತ್ತು ಪ್ಯಾಟ್ ಕಮ್ಮಿನ್ಸ್ ಸಹಿತ ಹಲವು ಕ್ರಿಕೆಟಿಗರು ಭಾರತದ ಕರೊನಾ ವಿರುದ್ಧದ ಹೋರಾಟಕ್ಕೆ ಆರ್ಥಿಕ ನೆರವು ನೀಡಿದ್ದರು.