

ಸಂದೀಪ್ ಸಾಲ್ಯಾನ್ ಬಂಟ್ವಾಳ
ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಕವಿ ಶಿಷ್ಯ ಖ್ಯಾತಿಯ ಪಂಜೆ ಮಂಗೇಶರಾಯರು ಹುಟ್ಟಿದ ಬಂಟ್ವಾಳದ ಅವರ ಮನೆ ಸನಿಹವೇ ನಿರ್ಮಾಣಗೊಳ್ಳುತ್ತಿರುವ ಪಂಜೆ ಭವನದ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದಿದೆ. ಏಳು ವರ್ಷಗಳ ಹಿಂದೆ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದರೂ ಅನುದಾನ ಕೊರತೆಯಿಂದಾಗಿ ಕಟ್ಟಡದ ಕೆಲಸ ಇನ್ನೂ ಪೂರ್ಣಗೊಂಡಿಲ್ಲ!
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಪಂಜೆ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಬಂಟ್ವಾಳದ ಪಂಜೆ ಅಭಿಮಾನಿಗಳು, ಸಾಹಿತ್ಯಾಸಕ್ತರ ಹಲವು ವರ್ಷಗಳ ಕನಸಿನ ಕೂಸು ಇದಾಗಿದೆ. ಈ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬಂಟ್ವಾಳದ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ದೊರಕಲಿದೆ.
ಪಂಜೆ ಮಂಗೇಶರಾಯರು ಜನಿಸಿದ ಮನೆ ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಪಕ್ಕ ಈಗಲೂ ಇದೆ. ಪಂಜೆಯವರ ಹೆಸರಿನಲ್ಲಿ ಅವರ ಹುಟ್ಟೂರಿನಲ್ಲಿ ಭವನ ನಿರ್ಮಿಸಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ನೀಡುವ ಪ್ರಯತ್ನ ಹಲವು ವರ್ಷಗಳ ಹಿಂದೆ ನಡೆದಿದೆ. ಬಂಟ್ವಾಳದ ಸರ್ಕಾರಿ ಆಸ್ಪತ್ರೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಧ್ಯೆ ಇರುವ 51 ಸೆಂಟ್ಸ್ ಜಮೀನನ್ನು ಮೀಸಲಿಟ್ಟು ಪಂಜೆ ಮಂಗೇಶರಾಯರ ಸ್ಮಾರಕ ಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.
ಅರ್ಧಕ್ಕೆ ನಿಂತ ಕಾಮಗಾರಿ
2017ರಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ನಿರ್ದೇಶನ ಮೇರೆಗೆ ಪಂಜೆ ಭವನ ನಿರ್ಮಾಣಕ್ಕೆ ಅಂದಾಜು ಪಟ್ಟಿಯನ್ನು ಕರ್ನಾಟಕ ಗೃಹ ಮಂಡಳಿ ವತಿಯಿಂದ ತಯಾರಿಸಿ ಆಡಳಿತ ಅನುಮೋದನೆಗೆ ನೀಡಲಾಗಿತ್ತು. ಆ ವರ್ಷ ಅಕ್ಟೋಬರ್‌ನಲ್ಲಿ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯ 5 ಕೋಟಿ ರೂ. ವೆಚ್ಚದ ಪ್ರಸ್ತಾಪಿತ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೂ ಮೊದಲು 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭ ಬಂಟ್ವಾಳದಲ್ಲಿ ಪಂಜೆ ಸ್ಮಾರಕ ನಿರ್ಮಾಣಕ್ಕೆ 50 ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಆಗ ಭವನಕ್ಕೆ ಸ್ಥಳ ನಿಗದಿಯಾಗಿರಲಿಲ್ಲ. ಶಿಲಾನ್ಯಾಸ ಬಳಿಕ ಕಟ್ಟಡ ನಿರ್ಮಾಣ ಕಾಮಗಾರಿ ವೇಗ ಪಡೆದಿದ್ದರೂ ಕ್ರಮೇಣ ಅನುದಾನ ಕೊರತೆಯಿಂದಾಗಿ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿದೆ.
ಹುಟ್ಟಿದ ಮನೆ ವೈದ್ಯರ ವಸತಿ ಗೃಹ
ಪಂಜೆಯವರು ಹುಟ್ಟಿ, ಬಾಳಿದ ಮನೆ ಈಗ ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯರ ವಸತಿ ಗೃಹವಾಗಿ ಸದ್ಬಳಕೆಯಾಗಿದೆ. ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಯೋಚನೆ ಇದೆ. ಸಾರ್ವಜನಿಕರ ಸೇವೆಗೆಂದು ಕವಿಯೊಬ್ಬರು ಹುಟ್ಟಿ ಬೆಳೆದ ಮನೆಯನ್ನು ಸರ್ಕಾರಕ್ಕೆ ಒಪ್ಪಿಸುವುದು ವಿರಳ. ಪಂಜೆ ಮಂಗೇಶರಾಯ ಸ್ಮಾರಕ ಭವನದ ಕಾಮಗಾರಿಯನ್ನು ಅವರ ಕುಟುಂಬದ ಸದಸ್ಯರು 2020ರಲ್ಲಿ ವೀಕ್ಷಿಸಿ ಸಂತಸಪಟ್ಟಿದ್ದರು. ಮೊಮ್ಮಗಳಾದ ಉಷಾ ಅರೋರಾ ಮತ್ತು ಅವರ ಪತಿ ಪ್ರಕಾಶ್ ಅರೋರಾ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಗ್ರಂಥಾಲಯ, ಸಾಹಿತ್ಯ, ರಂಗ ಚಟುವಟಿಕೆಗಳಿಗೆ ಅಗತ್ಯವಿರುವ ವೇದಿಕೆ, ಸಭಾಂಗಣ ಇತ್ಯಾದಿ ಸೌಲಭ್ಯಗಳೊಂದಿಗೆ ಪಂಜೆ ಭವನ ನಿರ್ಮಾಣಗೊಳ್ಳುತ್ತಿದೆ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ರಾಜೇಶ್, ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ