

ಮನೋಹರ್ ಬಳಂಜ ಬೆಳ್ತಂಗಡಿ
ತಾಲೂಕಿನ ಕಲ್ಮಂಜ ಗ್ರಾಮ ವ್ಯಾಪ್ತಿ ಅಲ್ಲಲ್ಲಿ ವಿಂಗಡಣೆಯಾಗಿರುವ ಕಾರಣದಿಂದ ಪಂಚಾಯತ್ ಆದಾಯ ಕುಂಠಿತವಾಗಿದೆ.
ಕಲ್ಮಂಜ ಗ್ರಾಮ ಪಂಚಾಯಿತಿ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿದೆ. ಆದರೆ ಗ್ರಾಮದ ವ್ಯಾಪ್ತಿ ಉಜಿರೆ, ಮುಂಡಾಜೆ, ನಡ, ಕನ್ಯಾಡಿ, ಧರ್ಮಸ್ಥಳ ಗ್ರಾಮಗಳವರೆಗೂ ಚಿಕ್ಕ ಚಿಕ್ಕ ಪ್ರದೇಶಗಳಾಗಿ ವಿಸ್ತರಿಸಿದೆ. ಈ ಗ್ರಾಮಗಳ ಆಸುಪಾಸಿನಲ್ಲೂ ಹಲವು ಸ್ಥಳಗಳು ಇವೆ. ಪಂಚಾಯಿತಿಯ ಒಟ್ಟು ವ್ಯಾಪ್ತಿ ಸತ್ಯನಪಲ್ಕೆ, ನಿಡಿಗಲ್, ಆರ್ಲ, ಪಜಿರಡ್ಕ, ಕುಡೆಂಚಿ ಹೀಗೆ ಅಲ್ಲಲ್ಲಿ ವಿಸ್ತರಿಸಿದ್ದು ಗ್ರಾಮದಲ್ಲಿ ಮೃತ್ಯುಂಜಯ ಮತ್ತು ನೇತ್ರಾವತಿ ನದಿ ಹರಿಯುತ್ತಿರುವುದರಿಂದ ಗ್ರಾಮ ದ್ವೀಪದಂತಾಗಿದೆ.
ವ್ಯಾಪಾರ ವಹಿವಾಟಿಗೆ ಸತ್ಯನಪಲ್ಕೆ ಕುಡೆಂಚಿಯವರು ಮುಂಡಾಜೆಯ ಸೋಮಂತಡ್ಕವನ್ನು, ನಿಡಿಗಲ್, ಪಜಿರಡ್ಕದವರು ಉಜಿರೆಯನ್ನು ಹಾಗೂ ಆರ್ಲದವರು ಕನ್ಯಾಡಿಯನ್ನು ಅವಲಂಬಿಸುವ ಕಾರಣ ಹಾಗೂ ಪಂಚಾಯಿತಿ ಪ್ರದೇಶದಿಂದ ಈ ಸ್ಥಳಗಳು ಹತ್ತಾರು ಕಿಲೋ ಮೀಟರ್ ದೂರದಲ್ಲಿರುವುದರಿಂದ ಕಲ್ಮಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ವ್ಯಾಪಾರ ವಹಿವಾಟು ಇರುವುದಿಲ್ಲ. ಇದರಿಂದ ಪಂಚಾಯಿತಿಗೆ ವಾಣಿಜ್ಯ ತೆರಿಗೆ ಬರುತ್ತಿಲ್ಲ. ಕೇವಲ ಮನೆ ತೆರಿಗೆ ಮೊತ್ತವಷ್ಟೇ ಪಂಚಾಯಿತಿಗೆ ಪ್ರಮುಖ ಆದಾಯವಾಗಿದ್ದು, ವಾರ್ಷಿಕ ಸುಮಾರು 6 ಲಕ್ಷ ರೂ. ವರಮಾನವಿದೆ. ಇದರಲ್ಲೇ ಪಂಚಾಯಿತಿ ಮಟ್ಟದ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಅನಿವಾರ್ಯವಾಗಿದೆ.
ಪಂಚಾಯಿತಿ ವ್ಯಾಪ್ತಿ ಅಲ್ಲಲ್ಲಿ ಹಂಚಿಹೋಗಿದ್ದು ಗ್ರಾಮಸ್ಥರು ಪಂಚಾಯಿತಿಗೆ ಬರಲು ಬಹಳಷ್ಟು ದೂರ ಕ್ರಮಿಸಬೇಕಿದೆ. ಗ್ರಾಮ ವ್ಯಾಪ್ತಿಯಲ್ಲಿ ಕೇವಲ ಸಣ್ಣ ಮಟ್ಟದ ಹಾಗೂ ಗೂಡಂಗಡಿಗಳು ಮಾತ್ರ ಕಾರ್ಯನಿರ್ವಹಿಸುತ್ತಿರುವುದರಿಂದ ಗ್ರಾಮಸ್ಥರು ಇತರ ಗ್ರಾಮಗಳಲ್ಲಿರುವ ಪೇಟೆಗಳನ್ನು ಅವಲಂಬಿಸುವಂತಾಗಿದೆ. ಇದರಿಂದ ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿಯಾಗದೆ ಪಂಚಾಯಿತಿಯ ಆದಾಯಕ್ಕೆ ಹೊಡೆತ ಬಿದ್ದಿದೆ.
1994ರಲ್ಲಿ ಮುಂಡಾಜೆ ಪಂಚಾಯಿಂದ ವಿಂಗಡನೆಗೊಂಡು ಕಲ್ಮಂಜ ಗ್ರಾಮ ಪಂಚಾಯಿತಿ ಸ್ಥಾಪನೆಗೊಂಡಿತು. 2011ರ ಜನಗಣತಿ ಪ್ರಕಾರ 3709 ಜನಸಂಖ್ಯೆ 779 ಮನೆಗಳನ್ನು ಹೊಂದಿದೆ. ಹತ್ತು ಗ್ರಾಪಂ ಸದಸ್ಯರಿದ್ದಾರೆ. 2015ರಲ್ಲಿ ಪಂಚಾಯಿತಿಗೆ ನೂತನ ಕಟ್ಟಡ ರಚನೆಯಾಗಿದ್ದು ಕಾಯಂ ಪಿಡಿಒ, ಕಾರ್ಯದರ್ಶಿ ಸೇರಿದಂತೆ ಅಗತ್ಯ ಸಿಬ್ಬಂದಿ ವ್ಯವಸ್ಥೆ ಹೊಂದಿದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಗ್ರಾಮದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಪರ್ಕ ವ್ಯವಸ್ಥೆ ತುಂಬ ದೂರವಾಗಿದ್ದು, ಅಗತ್ಯಕಷ್ಟೆ ಜನರು ಗುರಿಪ್ಪಳ್ಳ ಕ್ರಾಸ್ ಬಳಿ ಇರುವ ಪಂಚಾಯಿತಿ ಸ್ಥಳಕ್ಕೆ ಬರುತ್ತಿದ್ದಾರೆ. ಪಂಚಾಯಿತಿ ಪ್ರದೇಶದಲ್ಲೂ ಹೋಟೆಲ್, ಅಂಗಡಿ ಜೆರಾಕ್ಸ್ ಮೊದಲಾದ ಅಗತ್ಯ ಸೌಲಭ್ಯಗಳು ಇಲ್ಲ. ಪಂಚಾಯಿತಿ ಆದಾಯ ಕಡಿಮೆ ಇದೆ. ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ಯೋಜನೆಗಳನ್ನು ರೂಪಿಸಲಾಗಿದ್ದು ಇವುಗಳನ್ನು ಅನುಷ್ಠಾನಗೊಳಿಸಿ ಆದಾಯವನ್ನು ಹೆಚ್ಚಿಸಿ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಯೋಜಿಸಲಾಗಿದೆ - ವಿಮಲಾ ಕೆ., ಅಧ್ಯಕ್ಷೆ, ಕಲ್ಮಂಜ ಗ್ರಾಪಂ. ನಾವು ಪಂಚಾಯಿತಿಗೆ ಬರಬೇಕಾದರೆ ಸುಮಾರು 12 ಕಿ.ಮೀ ದೂರ ಕ್ರಮಿಸಬೇಕು. ಸರಿಯಾದ ರಸ್ತೆ ಇಲ್ಲ. ಮೋರಿಗಳ ಕುಸಿತ ಹಿನ್ನೆಲೆ ಈಗ ಇರುವ ರಸ್ತೆಯಲ್ಲಿ ಸಂಚಾರ ನಿಬರ್ಂಧಿಸಲಾಗಿದೆ. ಅಗತ್ಯ ಕೆಲಸಗಳಿಗೆ ಪೇಟೆಗೆ ತೆರಳಲು ಆಗುತ್ತಿಲ್ಲ. ನಮ್ಮದು ದ್ವೀಪವಾಸಿಗಳ ಸ್ಥಿತಿಯಾಗಿದೆ. - ಸತೀಶ್ ಸತ್ಯನಪಲ್ಕೆ, ಕಲ್ಮಂಜ ಗ್ರಾಮಸ್ಥ https://www.vijayavani.net/edaniru-music-festival