

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಪಂಚ ಗ್ಯಾರಂಟಿ ಯೋಜನೆಯ ತಾಲೂಕುಮಟ್ಟದ ಅನುಷ್ಠಾನ ಸಮಿತಿಯ ಆಗಸ್ಟ್ ತಿಂಗಳ ಸಭೆ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಅಧ್ಯಕ್ಷತೆಯಲ್ಲಿ ಸಮಿತಿ ಕಚೇರಿಯಲ್ಲಿ ನಡೆಯಿತು.
ಮೆಸ್ಕಾಂ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಹಾರ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಉದ್ಯೋಗ ವಿನಿಮಯ ಕಚೇರಿ ಮೂಲಕ ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳಲ್ಲಿ ಸರ್ಕಾರದಿಂದ ಬಿಡುಗಡೆಯಾದ ಅನುದಾನ, ಸವಲತ್ತು ಪಡೆದ ಫಲಾನುಭವಿಗಳ ಸಂಖ್ಯೆ ಪರಿಶೀಲಿಸಲಾಯಿತು.
ಗೃಹಲಕ್ಷ್ಮೀ ಯೋಜನೆಯಡಿ 58,792 ಫಲಾನುಭವಿಗಳಿದ್ದು, ಆಗಸ್ಟ್-2023ರಿಂದ ಈವರೆಗೆ 227,28,44,000 ರೂ. ಸಹಾಯಧನ ದೊರಕಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಡಿ ಜುಲೈ ತಿಂಗಳಲ್ಲಿ 49,303 ಪಡಿತರ ಚೀಟಿದಾರರಿಗೆ 9,922 ಕ್ವಿಂಟಾಲ್ ಅಕ್ಕಿ ವಿತರಿಸಲಾಗಿದೆ. ಪ್ರತಿ ಕೆ.ಜಿ.ಗೆ 34 ರೂ.ನಂತೆ 55,49,55,540.00 ರೂ. ಅನುದಾನ ಆಗಸ್ಟ್-2023ರಿಂದ ಈವರೆಗೆ ತಾಲೂಕಿನ ಪಡಿತರ ಚೀಟಿದಾರರಿಗೆ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದರು.
ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಒಟ್ಟು 6,072 ಫಲಾನುಭವಿಗಳಿದ್ದು, ಬೆಳ್ತಂಗಡಿ ತಾಲೂಕಿನ 815 ಅಭ್ಯರ್ಥಿಗಳಿಗೆ 2025ರ ಮೇ ತಿಂಗಳಲ್ಲಿ 22,81,500.00 ರೂ. ಸಹಾಯಧನ ಡಿ.ಬಿ.ಟಿ ಮೂಲಕ ವಿತರಿಸಲಾಗಿದೆ. ಆಗಸ್ಟ್-2023ರಿಂದ 2025ರ ಮೇ ತಿಂಗಳವರೆಗೆ 1,65,40,500.00 ರೂ.ಗಳನ್ನು ಸರ್ಕಾರವು ಫಲಾನುಭವಿಗಳ ಖಾತೆಗೆ ಜಮಾ ಮಾಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಧರ್ಮಸ್ಥಳ ಘಟಕದ ಬಸ್ಗಳ ಮೂಲಕ 2025ರ ಜುಲೈ ತಿಂಗಳಲ್ಲಿ 6,71,329 ಮಹಿಳಾ ಪ್ರಯಾಣಿಕರು ಯೋಜನೆಯ ಸವಲತ್ತು ಪಡೆದಿದ್ದಾರೆ. ಜೂನ್-2023ರಿಂದ ಈವರೆಗೆ 1,62,02,924 ಪ್ರಯಾಣಿಕರು ಪ್ರಯಾಣಿಸಿದ್ದು, 74,21,87,667 ರೂ. ಬಿಡುಗಡೆಯಾಗಿರುವುದಾಗಿ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್, ಗ್ಯಾರಂಟಿ ಯೋಜನೆಗಳ ತಾಲೂಕು ಅನುಷ್ಠಾನ ಸಮಿತಿ ಸದಸ್ಯರು, ನೋಡಲ್ ಅಧಿಕಾರಿ ಹೆರಾಲ್ಡ್ ಸಿಕ್ವೇರಾ ಉಪಸ್ಥಿತರಿದ್ದರು.
25,524 ಕುಟುಂಬಗಳಿಗೆ ಸಹಾಯಧನ
ಸರ್ಕಾರದ ಪಂಚ ಯೋಜನೆಗಳ ಸವಲತ್ತು ಪಡೆಯಲು ಬಾಕಿ ಇರುವ ಫಲಾನುಭವಿಗಳ ಅರ್ಜಿ ವಿಲೇವಾರಿಗೊಳಿಸುವ ಕುರಿತು ಚರ್ಚಿಸಲಾಯಿತು. ಗೃಹಜ್ಯೋತಿ ಯೋಜನೆಯಡಿ ಉಜಿರೆ ಉಪವಿಭಾಗದಲ್ಲಿ 2025ರ ಜುಲೈ ತಿಂಗಳಲ್ಲಿ 25,524 ಕುಟುಂಬಗಳಿಗೆ 1,33,12,932 ರೂ., ಬೆಳ್ತಂಗಡಿ ಉಪವಿಭಾಗದಲ್ಲಿ 2025ರ ಜುಲೈ ತಿಂಗಳಲ್ಲಿ 44,407 ಕುಟುಂಬಗಳಿಗೆ 2,53,06,917 ರೂ. ಸಹಾಯಧನ ದೊರಕಿದ್ದು ತಾಲೂಕಿಗೆ ಈವರೆಗೆ 202,89,599 ರೂ. ಸಹಾಯಧನ ದೊರಕಿದೆ ಎಂದು ಅಧಿಕಾರಿಗಳು ತಿಳಿಸಿದರು.