

ಲಖನೌ: ಆನ್ಲೈನ್ ಗೇಮಿಂಗ್ ಪಬ್-ಜಿ ಮೂಲಕ ಪರಿಚಯವಾದ ವ್ಯಕ್ತಿಯನ್ನು ಹುಡುಕಿಕೊಂಡು ಮಹಿಳೆ ಒಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುವ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ.
ಪಾಕಿಸ್ತಾನ ಮೂಲದ ಸೀಮಾ ಗುಲಾಂ ಹೈದರ್(27) ಎಂಬ ಮಹಿಳೆಯೂ ಆನ್ಲೈನ್ ಗೇಮಿಂಗ್ ಪಬ್-ಜಿ ಮೂಲಕ ಪರಿಚಯವಾದ ಯುವಕ ಸಚಿನ್ ಸಿಂಗ್(22) ಜೊತೆ ವಾಸ ಮಾಡಲು ತನ್ನ ಹೆಸರಿನಲ್ಲಿದ್ದ ಜಮೀನನ್ನು ಮಾರಿ ಅದರಲ್ಲಿ ಬಂದ 12 ಲಕ್ಷ ರೂಪಾಯಿ ಹಣದ ಜೊತೆಗೆ ಭಾರತಕ್ಕೆ ನೇಪಾಳದ ಮೂಲಕ ಪ್ರವೇಶಿಸಿದ್ದಳು.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ನೊಯ್ಡಾದ ಡಿಸಿಪಿ ಸಾದ್ ಮಿಯಾ ಖಾನ್ ಸೀಮಾ ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ರಿಂಡ್ ಹಜಾನಾ ಪ್ರಾಂತ್ಯದವರಾಗಿದ್ದು, ಈಕೆಗೆ 2014ರಲ್ಲಿ ಕಟ್ಟಡ ಕೂಲಿ ಕಾರ್ಮಿಕರೊಬ್ಬರ ಜೊತೆ ವಿವಾಹವಾಗಿದ್ದು, ಈಕೆಗೆ ನಾಲ್ವರು ಮಕ್ಕಳಿದ್ದು, ಕರಾಚಿಯಲ್ಲಿ ನೆಲೆಸಿದ್ದರು. ಪತಿ-ಪತ್ನಿ ನಡುವಿನ ಸಂಬಂಧ ಚೆನ್ನಾಗಿರದ ಕಾರಣ ಈಕೆ ಆತನಿಂದ ದೂರವಾಗಲು ಹಲವು ಬಾರಿ ಪ್ರಯತ್ನಿಸಿದ್ದಳು.
2019-20ರ ಸಮಯದಲ್ಲಿ ಈಕೆಯ ಪತಿ ಕೆಲಸದ ನಿಮಿತ್ತ ಸೌದಿ ಅರೇಬಿಯಾಗೆ ತೆರಳಿದ್ದಾನೆ. ಈ ವೇಳೆ ಸೀಮಾಗೆ ಉತ್ತರಪ್ರದೇಶದ ನೊಯ್ಡಾ ಮೂಲದ ಯುವಕ ಸಚಿನ್ ಪರಿಚಯವಾಗಿದೆ. ಇಬ್ಬರ ನಡುವಿನ ಪರಿಚಯ ಆತ್ಮೀಯತೆ ತಿರುಗಿ ಪರಸ್ಪರ ನಂಬರ್ ಹಂಚಿಕೊಂಡು ಪ್ರತಿನಿತ್ಯ ಮಾತನಾಡಲು ಶುರು ಮಾಡಿದ್ದಾರೆ.
ವರ್ಷಗಳು ಕಳೆದಂತೆ ಇವರಿಬ್ಬರು ಮದುವೆಯಾಗಲು ನಿರ್ಧರಿಸಿದ್ದು, ಅದರಂತೆ ಸೀಮಾ ತನ್ನ ಹೆಸರಿನಲ್ಲಿದ್ದ ಜಮೀನನ್ನು ಮಾರಿ ಅದರಲ್ಲಿ ಬಂದ 12 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಟ್ರಾವೆಲ್ ಏಜೆಂಟ್ ಒಬ್ಬರ ಸಹಾಯದಿಂದ ನೇಪಾಳಕ್ಕೆ ಬಂದಿದ್ದಾಳೆ. ಬಳಿಕ ನೇಪಾಳದಿಂದ ಬಸ್ ಮೂಲಕ ಈಕೆ ದೆಹಲಿಗೆ ತಲುಪಿದ್ದು, ಅಲ್ಲಿ ಸಚಿನ್ ಈಕೆಯನ್ನು ಬರಮಾಡಿಕೊಂಡಿದ್ದಾನೆ.
ಇದನ್ನೂ ಓದಿ: VIDEO| ವಿದೇಶಿ ಮಹಿಳೆಯ ಜೊತೆ ಆಟೋ ಚಾಲಕನ ಅಸಭ್ಯ ವರ್ತನೆ
ಬಳಿಕ ಆಕೆಯನ್ನು ನೊಯ್ಡಾದ ರಬುಪುರದಲ್ಲಿ ತಾನು ವಾಸಿಸುತ್ತಿದ್ದ ನಿವಾಸಕ್ಕೆ ಕರೆದುಕೊಂಡು ಬಂದಿದ್ದು, ಇಬ್ಬರು ಲಿವ್-ಇನ್-ರಿಲೇಷನ್ಶಿಪ್ನಲ್ಲಿದ್ದರು. ಮುಂದೊಂದು ದಿನ ಮದುವೆಯಾಗಲು ನಿರ್ಧರಿಸಿದ್ದು, ಈ ವಿಚಾರವಾಗಿ ಸಚಿನ್ ತಂದೆ ನೇತ್ರಪಾಲ್ ಸಿಂಗ್ ವಕೀಲರೊಬ್ಬರನ್ನು ಭೇಟಿ ಮಾಡಿ ಕೋರ್ಟ್ ವಮದುವೆ ಮಾಡಿಸಿ ಕೊಡುವಂತೆ ವಿನಂತಿಸಿದ್ದಾರೆ.
ಈ ಬಗ್ಗೆ ವಕೀಲರು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದು, ಖಚಿತ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ಸೀಮಾ ಐದನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು ಸಹ ಈಕೆಗೆ ಕಂಪ್ಯೂಟರ್ ಆಪರೇಟಿಂಗ್ ಹಾಗೂ ಎಲಿಮಿನೇಟರಿ ಇಂಗ್ಲೀಷ್ನಲ್ಲಿ ಪರಿಣಿತಳಾಗಿದ್ದಳು. ಆಕೆಯ ಮೊಬೈಲ್ ಫೋನನ್ನು ಪೋರೆನ್ಸಿಕ್ ವಿಭಾಗಕ್ಕೆ ಕಳುಹಿಸಿ ಕೊಡಲಾಗಿದ್ದು, ಆಕೆ ನೇಪಾಳದ ಮೂಲಕ ಭಾರತದ ಗಡಿಯನ್ನು ಏಕೆ ಪ್ರವೇಶಿಸಿದ್ದಳು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ.
ಶೀಘ್ರದಲ್ಲೇ ಮತ್ತಷ್ಟು ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಪ್ರಕರಣ ಸಂಬಂಧ ಈಗಾಗಲೇ ಮಹಿಳೆ ಸೀಮಾ, ಸಚಿನ್ ಸಿಂಗ್ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್ನನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಬಂಧಿತ ಮಹಿಳೆ ನಾಲ್ವರು ಮಕ್ಕಳು ಏಳು ವರ್ಷಕ್ಕಿಂತ ಚಿಕ್ಕವರಿದ್ದು, ಅವರನ್ನು CWC ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ನೊಯ್ಡಾದ ಡಿಸಿಪಿ ಸಾದ್ ಮಿಯಾ ಖಾನ್ ತಿಳಿಸಿದ್ದಾರೆ.