

ಪಾಕಿಸ್ತಾನ: ಪಾಕಿಸ್ತಾನದ ಖ್ಯಾತ ಟಿಕ್ ಟಾಕ್ ಸ್ಟಾರ್ ಹಿರೀಂ ಶಾ ಪತಿ ಬಿಲಾಲ್ ಶಾ ಕಿಡ್ನಾಪ್ ಆಗಿದ್ದಾರೆ. ತನ್ನ ಪತಿಯನ್ನು ಅಪರಿಚಿತರ ಗುಂಪು ಯಾವ ಕಾರಣಕ್ಕೆ ಕಿಡ್ನಾಪ್ ಮಾಡಿದೆ ಎಂದು ತಿಳಿಯುತ್ತಿಲ್ಲ. ಅವರನ್ನು ಹುಡುಕಿ ಕೊಡಿ ಎಂದು ಟ್ವಿಟರ್ನಲ್ಲಿ ವಿಡಿಯೋ ಹಾಕಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್ಐ) ಸಹಾಯವನ್ನು ಕೋರಿದ್ದಾರೆ.
ವಿಡಿಯೋದಲ್ಲಿ ಏನಿದೆ?: ತನ್ನ ಪತಿ ನಿರಪರಾಧಿ ಮತ್ತು ಯಾವುದೇ ಕ್ರಿಮಿನಲ್ ದಾಖಲೆ ಮತ್ತು ಯಾವುದೇ ರಾಜಕೀಯ ಸಂಪರ್ಕಗಳನ್ನು ಹೊಂದಿಲ್ಲ. ಲಂಡನ್ನಲ್ಲಿದ್ದ ನನ್ನ ಪತಿ ಬಿಲಾಲ್ ಕೆಲಸದ ನಿಮಿತ್ತ ಪಾಕಿಸ್ತಾನಕ್ಕೆ ಹೋಗಿದ್ದರು. ಕರಾಚಿಯಲ್ಲಿ ಪತಿಯನ್ನು ಅಪಹರಿಸಲಾಗಿದೆ. ಪತಿಯ ಕಿಡ್ನಾ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹರಿಂ ಶಾ ಹೇಳಿರುವುದನ್ನು ವಿಡಿಯೋದಲ್ಲಿ ನೋಡ ಬಹುದಾಗಿದೆ.
ಈ ವಿಡಿಯೋ ಮೂಲಕ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ಗೆ ತನ್ನ ಪತಿಯನ್ನು ಹುಡುಕಿಕೊಡುವಂತೆ ಕೋರಿದ್ದಾರೆ. ಸದ್ಯ ಸಿಂದ್ ಹೈ ಕೋರ್ಟ್ಗೆ ಮನವಿ ಸಲ್ಲಿಸಲಾಗಿದ್ದು, ಕಿಡ್ನಾಪ್ ಮಾಡಿದವರ ವಿರುದ್ದ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಸದ್ಯ ಸುದ್ದಿಯಲ್ಲಿರುವ ಟಿಕ್ ಟಾಕ್ ಸ್ಟಾರ್ ಈ ಹಿಂದೆ ಕೂಡಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಳು. ಕಳೆದ ವರ್ಷ ತಾನು ಪಾಕಿಸ್ತಾನದಿಂದ ಇಂಗ್ಲೆಂಡಿಗೆ ಅಪಾರ ಮೊತ್ತದ ಹಣದ ಜತೆ ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಪಾಕಿಸ್ತಾನದ ರಾಷ್ಟ್ರೀಯ ತನಿಖಾ ಸಂಸ್ಥೆ ಹರೀಂ ಶಾ ವಿರುದ್ದ ಮನಿ ಲಾಂಡ್ರಿ ಪ್ರಕರಣ ದಾಖಲಿಸಿತ್ತು. ಇದೀಗ ಪತಿ ಕಿಡ್ನಾಪ್ ಆಗಿದ್ದಾರೆಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.