

ನವದೆಹಲಿ: ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘನೆ ಪ್ರಕರಣ ಹೆಚ್ಚಿದ್ದು, ಉಗ್ರರು ಸುರಂಗ ಕೊರೆದು ಭಾರತ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ಮುಂದುವರಿದಿರುವಂತೆಯೇ ಪಾಕಿಸ್ತಾನದ ಫೈಟರ್ ಜೆಟ್ ಒಂದು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಸಮೀಪವೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಪೂಂಛ್ ಜಿಲ್ಲೆಯ ಗಡಿ ಬಾಗದಲ್ಲಿ ಪಾಕಿಸ್ತಾನದ ಫೈಟರ್ ಜೆಟ್ ಸೋಮವಾರ ಬೆಳಗ್ಗೆ ಹಾರಾಟ ನಡೆಸಿತ್ತು. ಈ ಮೂಲಕ ಪಾಕಿಸ್ತಾನ ಸೇನೆ ಅಂತಾರಾಷ್ಟ್ರೀಯ ಕಾನೂನು ಉಲ್ಲಂಘಿಸಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಫೈಟರ್ ಜೆಟ್ಗಳು ಗಡಿ ಭಾಗದಲ್ಲಿ 10 ಕಿ.ಮೀ. ಸುತ್ತಳತೆ ವ್ಯಾಪ್ತಿಯಲ್ಲಿ ಹಾರಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಆದಾಗ್ಯೂ ಪಾಕ್ ಈ ಅತಿಕ್ರಮಣ ತೋರಿದೆ.
ಆಕಾಶದಲ್ಲಿ ಜೆಟ್ ಸ್ಟ್ರೀಮ್ ಸ್ಪಷ್ಟವಾಗಿ ಗೋಚರಿಸಿದೆ. ಇದಕ್ಕೂ ಮೊದಲು ಕೆಲವು ಡ್ರೋನ್ಗಳು ಹಾರಾಟ ನಡೆಸಿದ್ದವು ಎಂದು ಸೇನಾ ಮೂಲಗಳು ತಿಳಿಸಿವೆ. ಈ ಕುರಿತ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಷ್ಟೆ. (ಏಜೆನ್ಸೀಸ್)